ಉಡುಪಿ: ಭಾರೀ ಮಳೆ, ಕಡಲ ಅಬ್ಬರಕ್ಕೆ ಇಬ್ಬರು ಮೀನುಗಾರರು ಬಲಿಯಾಗಿದ್ದಾರೆ. ಮಲ್ಪೆ ಮತ್ತು ಕಾಪು ಕಡಲ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದಾರೆ.
ಕಾಪು ಸಮೀಪದ ಉಳಿಯಾರಗೋಳಿಯ ನಿವಾಸಿ ಸಂಜೀವ ಕೋಟ್ಯಾನ್(55) ಮತ್ತು ಉದ್ಯಾವರ ಪಿತ್ರೋಡಿಯ ನಿವಾಸಿ ಗೋವರ್ಧನ್ ಕುಂದರ್(42) ಮೃತಪಟ್ಟ ಮೀನುಗಾರರು. ಅರಬ್ಬೀ ಸಮುದ್ರದಲ್ಲಿ ಸಂಜೀವ ಇತರೆ ಮೀನುಗಾರರ ಜೊತೆ ಮೀನುಗಾರಿಕೆಗೆ ತೆರಳಿದ್ದರು. ಪಡುಬಿದ್ರೆ ಕಡಲ ಕಿನಾರೆಯಿಂದ ಎರಡು ಕಿ.ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಕಡಲ ಅಲೆಗೆ ಸಿಲುಕಿ ಸಂಜೀವ ಮೃತಪಟ್ಟಿದ್ದಾರೆ. ಈ ಸಂಬಂಧ ಕಾಪು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
Advertisement
ಇತ್ತ ಮಲ್ಪೆ ಕಡಲಲ್ಲಿ ಗೋವರ್ಧನ್ ಟ್ರಾಲ್ ಬೋಟ್‍ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮಲ್ಪೆ ಲೈಟ್ ಹೌಸ್ ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಒಮ್ಮೆಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಜೊತೆಗೆ ಇದ್ದವರು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಗೋವರ್ಧನ್ ಸಾವನ್ನಪ್ಪಿದ್ದರು. ಸದ್ಯ ಈ ಸಂಬಂಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement
ಕಳೆದ 42 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದೆ. ಗುರುವಾರ ಬೆಳಗ್ಗೆ 8.30ರವರೆಗೆ ಜಿಲ್ಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶಗಳಲ್ಲಿ ನೆರೆಯ ಭೀತಿ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ನದಿ ತೀರದ ಜನ ಮುಂಜಾಗ್ರತೆ ವಹಿಸಿ, ಪ್ರವಾಸಿಗಳು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಡಳಿತ ಆದೇಶಿಸಿದೆ.
Advertisement
ಕಳೆದ 24 ಗಂಟೆಯಲ್ಲಿ ಉಡುಪಿಯಲ್ಲಿ 69 ಮಿಲಿಮೀಟರ್ ಸರಾಸರಿ ಮಳೆಯಾಗಿದೆ. ಹಾಗೆಯೇ ಮುಂದಿನ 24 ಗಂಟೆಯಲ್ಲಿ 115 ಮಿಮೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿದಿದೆ. ಸೋಮವಾರ ರಾತ್ರಿಯಿಂದ ನಿರಂತರ ಮಳೆಯಾಗುತ್ತಿದ್ದು, ಕಾರ್ಕಳ ತಾಲೂಕಿನಲ್ಲಿ 70 ಮಿಮೀ, ಕುಂದಾಪುರಲ್ಲಿ 55 ಮಿಮೀ, ಉಡುಪಿ ತಾಲೂಕಿನಲ್ಲಿ 80 ಮಿಮೀ ಮಳೆ ದಾಖಲಾಗಿದೆ. ಇತ್ತ ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಏರಿಯಾ ಬಳಿಯ ತೊರೆ ಉಕ್ಕಿ ಹರಿದಿದೆ. ವಾಹನ ನಿಲುಗಡೆ ಪ್ರದೇಶದ ಒಂದು ಭಾಗದಲ್ಲಿ ಮೊಣಕಾಲುವರೆಗೆ ನೀರು ನಿಂತಿದೆ.