ಹಾಸನ: ಪತಿ (Husband) ಎರಡನೇ ಮದುವೆಯಾಗಿದ್ದನ್ನು ಪ್ರಶ್ನಿಸಿದ್ದಕ್ಕೆ ಮೊದಲ ಪತ್ನಿಯನ್ನು (Wife) ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಲೂರು (Alur) ತಾಲೂಕಿನ ಯಡೂರು ಗ್ರಾಮದಲ್ಲಿ ನಡೆದಿದೆ.
ಹತ್ಯೆಯಾದವಳನ್ನು ರಾಧಾ (40) ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ಕುಮಾರ ಕೊಲೆಗೈದ ಆರೋಪಿಯಾಗಿದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ರಾಧಾ ಪತಿಯಿಂದ ಬೇರೆ ವಾಸವಾಗಿದ್ದಳು. ಜನವರಿ ಮೊದಲ ವಾರ ಕುಮಾರ ಶಬರಿಮಲೆಗೆ ತೆರಳಲು ಇರುಮುಡಿ ಕಟ್ಟುವ ವೇಳೆ ಪತ್ನಿ ಸ್ಥಾನದಲ್ಲಿ ಬೇರೊಬ್ಬ ಮಹಿಳೆ ಪೂಜೆ ಮಾಡಿದ ಬಗ್ಗೆ ರಾಧಾಗೆ ಮಾಹಿತಿ ತಿಳಿದಿತ್ತು. ಕುಮಾರ ಶಬರಿಮಲೆಗೆ ಹೋಗಿ ಬಂದ ದಿನವೇ ಇದೇ ವಿಚಾರವನ್ನು ಪ್ರಶ್ನೆ ಮಾಡಲು ಜ.10ರ ರಾತ್ರಿ ಯಡೂರಿಗೆ ರಾಧಾ ಬಂದಿದ್ದರು. ಇದನ್ನೂ ಓದಿ: ಟೆಕ್ಕಿ ಕೊಲೆ ಕೇಸ್ – ಆರೋಪಿಗೆ ಶರ್ಮಿಳಾ ಮೇಲೆ ಲವ್ ಶುರುವಾಗಿದ್ದು ಹೇಗೆ?
ಅದೇ ದಿನ ರಾಧಾಳನ್ನು ಕುಮಾರ ಮನೆಯಲ್ಲಿಯೇ ಹತ್ಯೆ ಮಾಡಿ ಹಾಸನ ತಾಲೂಕಿನ ಕಂದಲಿ ಬಳಿಯ ಯಗಚಿ ನದಿಗೆ ಶವ ಬಿಸಾಡಿದ್ದ. ಸೋಮವಾರ (ಜ.12) ತಾನೇ ಪೊಲೀಸರಿಗೆ ಮಾಹಿತಿ ನೀಡಿದ್ದ. ಇಂದು (ಜ.13) ಯಗಚಿ ನದಿಯಿಂದ ಪೊಲೀಸರು ಮೃತದೇಹ ಹೊರ ತೆಗೆದಿದ್ದಾರೆ. ಪತಿ ಕುಮಾರ ಹಾಗೂ ಆತನ ಮನೆಯವರು ಸೇರಿ ಹತ್ಯೆ ಮಾಡಿದ್ದಾರೆ ಎಂದು ರಾಧಾ ಕುಟುಂಬಸ್ಥರು ಆರೋಪಿಸಿದ್ದಾರೆ. ಆಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪತ್ನಿಗೆ ವಂಚನೆ – ಪ್ರೇಯಸಿ ಜೊತೆ ಪಲ್ಲಂಗದಲ್ಲಿದ್ದಾಗ ಸಿಕ್ಕಿ ಬಿದ್ದ ಟೆಕ್ಕಿ ಅರೆಸ್ಟ್

