ಬೀಜಿಂಗ್: ಚೀನಾದಲ್ಲಿ ಜನಸಂಖ್ಯೆ (Population) ಜೊತೆ ಉದ್ಯೋಗಿಗಳ ಸಂಖ್ಯೆಯೂ ಇಳಿಕೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಚೀನಾ ಸರ್ಕಾರ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು (Retirement Age) ಹೆಚ್ಚಿಸಲು ನಿರ್ಧರಿಸಿದೆ.
ಪುರುಷರ ನಿವೃತ್ತಿ ವಯಸ್ಸನ್ನು 63ಕ್ಕೆ ಏರಿಸಿದರೆ ಮಹಿಳೆಯರ ನಿವೃತ್ತಿ ವಯಸ್ಸನ್ನು ಅವರ ವೃತ್ತಿಗೆ ಅನುಗುಣವಾಗಿ 55 ಮತ್ತು 58ಕ್ಕೆ ಏರಿಸಲಾಗಿದೆ. ಮುಂದಿನ ವರ್ಷದ ಜನವರಿಯಿಂದ ಹೊಸ ನೀತಿ ಜಾರಿಯಾಗಲಿದೆ.
1950 ರಿಂದ ಚೀನಾ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಿರುವುದು ಇದೇ ಮೊದಲು. ಪ್ರಸ್ತುತ ನಿವೃತ್ತಿ ವಯಸ್ಸು ಪುರುಷರಿಗೆ 60 ಮತ್ತು ಮಹಿಳೆಯರಿಗೆ ವೃತ್ತಿಗೆ ಅನುಗುಣವಾಗಿ 50 (ಬ್ಲೂ ಕಾಲರ್) ಮತ್ತು 55 (ವೈಟ್ ಕಾಲರ್) ಆಗಿದೆ. ಇದನ್ನೂ ಓದಿ: PublicTV Explainer: 60 ವರ್ಷಗಳಲ್ಲೇ ಮೊದಲ ಬಾರಿಗೆ ಕುಸಿದ ಚೀನಾ ಜನಸಂಖ್ಯೆ – ಇದು ಹೇಗಾಯ್ತು ಗೊತ್ತಾ?
ಈ ನಿರ್ಧಾರ ಯಾಕೆ?
ಒಂದು ಕಡೆ ಜನಸಂಖ್ಯೆ ಇಳಿಕೆ ಆಗುತ್ತಿದೆ, ಇನ್ನೊಂದು ಕಡೆ ಹಿರಿಯ ನಾಗರಿಕರ ಸಂಖ್ಯೆ (Old Age People) ಏರಿಕೆ ಆಗುತ್ತಿದೆ. ಹಿಂದೆ ಜಾರಿಗೆ ತಂದ ಒಂದು ಕುಟುಂಬಕ್ಕೆ ಒಂದೇ ಮಗು ನೀತಿಯಿಂದಾಗಿ ಕೆಲಸಗಾರರ ಸಂಖ್ಯೆ ಕುಸಿಯುತ್ತಿದೆ. ಈಗ ನಿವೃತ್ತಿ ವಯಸ್ಸು ಸಮೀಪಿಸುವವರ ಸಂಖ್ಯೆ ಹೆಚ್ಚಾಗಿದ್ದು ಪಿಂಚಣಿ ನಿಧಿ ನೀಡಲು ಕಷ್ಟವಾಗುತ್ತಿದೆ.
ಅನೇಕ ಚೀನೀ ಪ್ರಾಂತ್ಯಗಳು ಈಗಾಗಲೇ ದೊಡ್ಡ ಆರ್ಥಿಕ ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ. ಈಗ ನಿವೃತ್ತಿ ವಯಸ್ಸು ಏರಿಕೆ ಮಾಡಿದ್ದರಿಂದ ಈ ಪ್ರಾಂತ್ಯಗಳಿಗೆ ಸ್ವಲ್ಪ ರಿಲೀಫ್ ಸಿಗಲಿದೆ.
2035ರ ವೇಳೆಗೆ ಚೀನಾದಲ್ಲಿ 60 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರ ಸಂಖ್ಯೆ 2035 ರ ವೇಳೆಗೆ 28 ಕೋಟಿಯಿಂದ 40 ಕೋಟಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ. ಈ ಚೀನಾದ ಸಂಖ್ಯೆ ಇದು ಬ್ರಿಟನ್ ಮತ್ತು ಅಮೆರಿಕದ ಒಟ್ಟು ಜನಸಂಖ್ಯೆಗೆ ಸಮಾನವಾಗಿರುತ್ತದೆ. ಒಂದು ವೇಳೆ ಸುಧಾರಣೆ ಕೈಗೊಳ್ಳದೇ ಇದ್ದರೆ ಸರ್ಕಾರದ ಬಜೆಟ್‌ನ ಬಹುಪಾಲು ಹಣ ಪಿಂಚಣಿ ಒಂದಕ್ಕೆ ಹೋಗುವ ಕಾರಣ ಸರ್ಕಾರ ನಿವೃತ್ತಿ ವಯಸ್ಸನ್ನು ಏರಿಕೆ ಮಾಡಿದೆ.
ವಿಶ್ವದಲ್ಲಿ ಸದ್ಯ ಭಾರತದ ಜನಸಂಖ್ಯೆ 142 ಕೋಟಿಗೆ ಏರಿದ್ದರೆ ಚೀನಾ ಜನಸಂಖ್ಯೆ 141 ಕೋಟಿಗೆ ಕುಸಿದಿದೆ.