ಕಾರವಾರ: ವಾಟ್ಸಪ್ ನಲ್ಲಿ ನೀವು ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆಯವರು ಅವಹೇಳನಕಾರಿ ಸಂದೇಶ ಕಳುಹಿಸಿದ್ರೆ ನೀವು ಜೈಲಿಗೆ ಹೋಗಬೇಕಾದಿತು.
ಹೌದು. ವಾಟ್ಸಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ಗ್ರೂಪ್ ಅಡ್ಮಿನ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ಮೊದಲ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದ ಬೈಲೂರಿನಲ್ಲಿ ನಡೆದಿದೆ.
Advertisement
ಮುರ್ಡೇಶ್ವರದ ಬೈಲೂರು ವ್ಯಾಪ್ತಿಯ ದೊಡ್ಡಬಲ್ಸೆ ನಿವಾಸಿ ಕೃಷ್ಣ ಸಣ್ಣತಮ್ಮ ನಾಯ್ಕ(30) ಬಂಧಿತ ಆರೋಪಿ. ರಿಕ್ಷಾ ಚಾಲಕನಾಗಿದ್ದ ಈತ `ಡಿ ಬಲ್ಸೆ ಬಾಯ್ಸ್’ ಎಂಬ ವಾಟ್ಸಪ್ ಗ್ರೂಪಿನ ಅಡ್ಮಿನ್ ಆಗಿದ್ದ.
Advertisement
ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ತಿರುಚಿ ಅಶ್ಲೀಲಗೊಳಿಸಿ ಅವಹೇಳನ ಮಾಡಿದ್ದ ಫೋಟೋ ಈ ಗ್ರೂಪ್ ನಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಆನಂದ ಮಂಜುನಾಥ ನಾಯ್ಕ ಎಂಬುವರು ಮುರುಡೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ಮತ್ತೊಬ್ಬ ಆರೋಪಿ ಗಣೇಶ ನಾಯ್ಕ ಎಂಬಾತನನ್ನೂ ಪೊಲೀಸರು ಬಂಧಿಸಿದ್ದು ಆತನಿಗೆ ನ್ಯಾಯಾಲಯದಲ್ಲಿ ಜಾಮೀನು ದೊರೆತಿದೆ. ಬಾಲಕೃಷ್ಣ ನಾಯ್ಕ ಎಂಬಾತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Advertisement
ಏಪ್ರಿಲ್ ಕೊನೆಯ ವಾರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಗಲಭೆಗಳಿಗೆ ಪ್ರಚೋದನೆ ನೀಡುವಂತಹ ವಿಚಾರಗಳನ್ನು ಹಾಕುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಉತ್ತರಪ್ರದೇಶದ ವಾರಣಾಸಿ ಜಿಲ್ಲೆಯ ಪೊಲೀಸರು ಮುಂದಾಗಿದ್ದರು.
Advertisement
ಈ ವಿಚಾರವಾಗಿ ವಾರಣಾಸಿಯ ಜಿಲ್ಲಾಧಿಕಾರಿ ಯೋಗೇಶ್ವರ್ ರಾಮ್ ಮಿಶ್ರಾ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿತಿನ್ ತಿವಾರಿ ಜಂಟಿ ಆದೇಶವನ್ನು ಹೊರಡಿಸಿದ್ದರು. ಈ ಆದೇಶದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿಯನ್ನು ಹರಡಿದರೆ ಆ ಗ್ರೂಪಿನ ಅಡ್ಮಿನ್ ಮೇಲೆ ಸೈಬರ್ ಕ್ರೈಮ್ ಕಾನೂನು, ಮಾಹಿತಿ ತಂತ್ರಜ್ಞಾನ ಕಾಯ್ದೆಯ ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗುವುದು ಎಂದು ತಿಳಿಸಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ನ್ಯೂಸ್ ಹೆಸರಿನಲ್ಲಿ ಗ್ರೂಪ್‍ಗಳು ಕ್ರಿಯೇಟ್ ಆಗಿವೆ. ಆದರೆ ಈ ಗ್ರೂಪ್‍ಗಳಲ್ಲಿ ಸುಳ್ಳು ಸುದ್ದಿಗಳು ಪ್ರಕಟವಾಗುತ್ತಿದ್ದು, ಕ್ರಾಸ್ ಚೆಕ್ ಮಾಡದೇ ಸುದ್ದಿಗಳನ್ನು ಶೇರ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೈಗೊಳ್ಳಲು ಮುಂದಾಗಿದ್ದೇವೆ ಎಂದು ಜಿಲ್ಲಾಡಳಿತ ತಿಳಿಸಿತ್ತು.
ಗ್ರೂಪಿನಲ್ಲಿ ಸದಸ್ಯನೊಬ್ಬ ಸುಳ್ಳು ಸುದ್ದಿ ಅಥವಾ ಧಾರ್ಮಿಕ ಸೌಹಾರ್ದತೆಗೆ ಅಡ್ಡಿ ತರುವಂತಹ ವಿಚಾರ, ವದಂತಿಯನ್ನು ಹಾಕಿದ್ರೆ ಅಡ್ಮಿನ್ ಆದವನು ಕೂಡಲೇ ಆತನನ್ನು ಗ್ರೂಪ್‍ನಿಂದ ಕಿತ್ತು ಹಾಕಬೇಕು. ಈ ರೀತಿಯ ಸಂದೇಶಗಳು ಹರಿದಾಡಿದರೆ ಜನರು ಸಮೀಪದ ಪೊಲೀಸ್ ಠಾಣೆಯಲ್ಲಿ ದೂರು ನೀಡಬಹುದು. ಬುಧವಾರ ಈ ಆದೇಶ ಪ್ರಕಟವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ವ್ಯಕ್ತಪಡಿಸಲು ಅವಕಾಶವಿದೆ. ಇದರ ಜೊತೆಗೆ ಜವಾಬ್ದಾರಿಯೂ ಇದೆ ಎಂದು ತಿಳಿಸಲಾಗಿತ್ತು.
ಇದನ್ನೂ ಓದಿ:ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!