ಬೆಳಗಾವಿ: ಮೊದಲು ಮಾಜಿ ಸಿಎಂ ಯಡಿಯೂರಪ್ಪ ಸಾಹೇಬರಿಗೆ ಕೊಡುವಂತಹ ಮರ್ಯಾದೆ ಕೊಡಲಿ ಎಂದು ಬೆಳಗಾವಿ ಗ್ರಾಮಾಂತರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಬಿಜೆಪಿಗೆ ಟಾಂಗ್ ಕೊಟ್ಟರು.
ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಡಿ.ಕೆ.ಶಿವಕುಮಾರ್ ಅವರಿಗೆ ಭಿನ್ನಮತವಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರ ಆರೋಪಕ್ಕೆ ನಾನೂ ಉತ್ತರ ಕೊಡಲಿಕ್ಕೆ ಆಗಲ್ಲ. ಅವರ ಮನೆಯನ್ನ ಮೊದಲು ಸರಿ ಮಾಡಿಕೊಳ್ಳಲಿ. ಮೊದಲು ಯಡಿಯೂರಪ್ಪ ಸಾಹೇಬರಿಗೆ ಕೊಡುವಂತಹ ಮರ್ಯಾದೆ ಕೊಡಲಿ ಎಂದು ಟೀಕಿಸಿದರು. ಇದನ್ನೂ ಓದಿ: ದೇವಸ್ಥಾನದ ಆವರಣದಲ್ಲಿ ಮಾಂಸ ಎಸೆದ ದುಷ್ಕರ್ಮಿಗಳು- 3 ಮಾಂಸದ ಅಂಗಡಿಗಳಿಗೆ ಬೆಂಕಿ
ದಕ್ಷಿಣ ಭಾರತ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಬರಲಿಕ್ಕೆ ಯಡಿಯೂರಪ್ಪ ಸಾಹೇಬ್ರು ಕಾರಣರಾಗಿದ್ದಾರೆ. ಮೊದಲು ಅವರಿಗೆ ಕೊಡುವಂತಹ ಗೌರವ ಸ್ಥಾನಮಾನ ಕೊಡಲಿ. ಮೊದಲು ಅವರ ಎಡೆಯಲ್ಲಿ ಬಿದ್ದಿರೋದನ್ನ ತಗೆದು ಸುಧಾರಿಸಿಕೊಳ್ಳಲಿ. ಆಮೇಲೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲಿ ಎಂದು ಯಡಿಯೂರಪ್ಪ ಅವರನ್ನ ಹಾಡಿ ಹೊಗಳಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸಿಎಂ ರೇಸ್‍ಗಾಗಿ ಹೊಡೆದಾಟ ನಡೆಯುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ಕೊಟ್ಟ ಅವರು, ಕೂಸು ಹುಟ್ಟುವುದಕ್ಕಿಂತ ಮುಂಚೆ ಕುಲಾವಿ ಅನ್ನೋ ರೀತಿ ಇದಾಗಿದೆ. ಮೊದಲು ನಮ್ಮ ಪಕ್ಷ 125 ಶಾಸಕರು ಆಯ್ಕೆಯಾಗಲಿ. ಶಾಸಕಾಂಗ ಸಭೆಯಲ್ಲಿ ತೀರ್ಮಾನ ಆಗಲಿ, ಹೈಕಮಾಂಡ್ ತೀರ್ಮಾನ ಆಗಲಿ. ಈಗಲೇ ಯಾರು ಗುದ್ದಾಡುತ್ತಿಲ್ಲ, ಜಿದ್ದಿಗೆ ಬಿದ್ದಿಲ್ಲ ಎಂದು ಸ್ಪಷ್ಟನೆ ಕೊಟ್ಟರು.
ಸಿದ್ದರಾಮೋತ್ಸವ ಅವರ ಹುಟ್ಟುಹಬ್ಬವನ್ನು ಎಲ್ಲರೂ ಕೂಡ ತುಂಬು ಮನಸ್ಸಿನಿಂದ ಮಾಡ್ತಾ ಇದ್ದೇವೆ. ರಾಜಕೀಯದಲ್ಲಿ 40 ವರ್ಷ ಏರಿಳಿತ ಕಂಡ ಒಬ್ಬ ನಾಯಕನ 75ನೇ ಹುಟ್ಟುಹಬ್ಬ ಎಲ್ಲರೂ ಸೇರಿ ಮಾಡ್ತಾ ಇದ್ದೇವೆ. ಇದಕ್ಕೆ ನಮ್ಮ ಪಕ್ಷದಲ್ಲಿ ಯಾವುದೇ ವಿರೋಧವಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಉಚಿತ ಬೈಕ್ ಅಂಬುಲೆನ್ಸ್ – 5 ತಿಂಗಳಿನಿಂದ ವ್ಯಕ್ತಿಯಿಂದ ಫ್ರೀ ಸರ್ವೀಸ್
ಸಿದ್ದರಾಮಯ್ಯ ನಾನೇ ಸಿಎಂ ಆಗುತ್ತೇನೆಂಬ ಹೇಳಿಕೆಗೆ ಉತ್ತರ ಕೊಟ್ಟ ಅವರು, ನಾನೇ ಸಿಎಂ ಆಗ್ತೇನೆಂದು ಸಿದ್ದರಾಮಯ್ಯ ಅವರು ಇಂಗಿತ ವ್ಯಕ್ತಪಡಿಸಿದ್ದು, ನಾವೆಲ್ಲೂ ಕೇಳಿಲ್ಲ. ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಮುಂಚೆಯಿಂದನೂ ಒಂದು ಪದ್ಧತಿ ಇದೆ. ಶಾಸಕರು ಆಯ್ಕೆಯಾಗಬೇಕು, ಶಾಸಕರ ಸಭೆ, ಹೈಕಮಾಂಡ್ ತೀರ್ಮಾನವಾಗಬೇಕು. ರಿಸಲ್ಟ್ ಬಂದಿಲ್ಲ ಈಗಲೇ ಅದನ್ನ ಹೇಳಲಿಕ್ಕೆ ಆಗಲ್ಲ. ಸಿದ್ದರಾಮಯ್ಯ ಸಾಹೇಬ್ರು ಇದನ್ನೆ ಹೇಳಿದ್ದಾರೆ ಎಂದು ಸಮರ್ಥನೆ ಮಾಡಿಕೊಂಡರು.