– ಸೇನೆಗೆ ಇವತ್ತು ಅಗ್ನಿ ಆರಿಸುವ ವಿಶ್ವಾಸ
ಚಾಮರಾಜನಗರ: ಕಳೆದೊಂದು ವಾರದಿಂದ ಬಂಡೀಪುರದ ಅರಣ್ಯ ಪ್ರದೇಶ ಧಗಧಗನೇ ಹೊತ್ತಿ ಉರಿದಿದೆ. ಬೆಂಕಿಯ ನರ್ತನಕ್ಕೆ ಹತ್ತು ಸಾವಿರ ಎಕರೆ ಅರಣ್ಯ ಪ್ರದೇಶ ಹೊತ್ತಿ ಉರಿದಿದೆ. ಅರಣ್ಯ ಸಿಬ್ಬಂದಿ, ನೂರಾರು ಸ್ವಯಂ ಸೇವಕರು ಹಗಲಿರುಳೆನ್ನದೇ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಬೆಂಕಿಯ ತೀವ್ರತೆ ಮುಂಜಾನೆ ವೇಳೆಗೆ ಇಳಿಕೆಯಾದ್ರೆ, ಮಧ್ಯಾಹ್ನದ ವೇಳೆಗೆ ತೀವ್ರವಾಗುತ್ತಿದೆ.
ತಡವಾಗಿಯಾದರೂ ಎಚ್ಚೆತ್ತುಕೊಂಡ ಸರ್ಕಾರ ಬೆಂಕಿ ನಂದಿಸಲು ಸೇನಾ ಹೆಲಿಕಾಪ್ಟರ್ ಗಳ ಮೊರೆ ಹೋಗಿದೆ. ಒಂದೆಡೆ ಬೆಂಕಿ ಬಿದ್ದ ಅರಣ್ಯ ಪ್ರದೇಶದ ಬಗ್ಗೆ ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ವೈಮಾನಿಕ ಸಮೀಕ್ಷೆ ನಡೆಸಿದ್ರೆ, ಇತ್ತ ಬಂಡೀಪುರದ ಹಿರೆಕೆರೆಯಲ್ಲಿ ನೀರು ಸಂಗ್ರಹಿಸಿದ ಸೇನಾ ಹೆಲಿಕಾಪ್ಟರ್‍ಗಳು ಹಿಮವದ್ ಗೋಪಾಲಸ್ವಾಮಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದ್ದ ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದ್ದವು.
ಒಟ್ಟಾರೆ ಬಂಡೀಪುರದಲ್ಲಿ ಧಗಧಗನೇ ಉರಿದ ಬೆಂಕಿ ಇನ್ನೂ ಅಲ್ಲಲ್ಲಿ ಜೀವಂತವಾಗಿದೆ. ಇದಲ್ಲದೆ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಬಂಡೀಪುರಕ್ಕು ಹರಡುವ ಸಾಧ್ಯತೆಗಳಿದ್ದು, ಬೆಂಕಿ ಹರಡದಂತೆ ಜಾಗ್ರತೆ ವಹಿಸಲಾಗಿದೆ. ಇನ್ನೂ ಮುನ್ನೇಚರಿಕಾ ಕ್ರಮವಾಗಿ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿರ್ಬಂಧಿಸಲಾಗಿದ್ದು ಗೋಪಾಲಸ್ವಾಮಿ ದೇವಸ್ಥಾನ ಬಂದ್ ಮಾಡಲಾಗಿದೆ. ಸದಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಗೋಪಾಲಸ್ವಾಮಿ ಬೆಟ್ಟಿ ಇದೀಗ ಬಿಕೋ ಎನ್ನುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv