ಮಂಗಳೂರು: ನೋಟು ಮುದ್ರಣಾಲಯದ ರಾಸಾಯನಿಕ ತ್ಯಾಜ್ಯವನ್ನು ಮಣ್ಣಿನೊಳಗೆ ಸುರಿದಿದ್ದರಿಂದ ಮೈಸೂರಿನ ಬೆಲವತ್ತ ಗ್ರಾಮದಲ್ಲಿ ಭೂಮಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೆಚ್‍ಡಿಕೆ, ಮೈಸೂರಿನಲ್ಲಿ ನೋಟು ಮುದ್ರಾಣಾಲಯದ ರಾಸಾಯನಿಕವನ್ನು ಮಣ್ಣಿನ ಒಳಗೆ ಹೂತಿದ್ದಾರೆ. ಇದರಿಂದಾಗಿ ಭೂಮಿಯಿಂದ ಬೆಂಕಿ ಬರುತ್ತಿದೆ. ಮೃತ ಬಾಲಕನ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕಾಗಿದೆ. ಘಟನೆಗೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು. ಸಿಎಂ ತವರು ಕ್ಷೇತ್ರದಲ್ಲೇ ಈ ನಿರ್ಲಕ್ಷ್ಯ ಖಂಡನೀಯ. ಘಟನೆಗೆ ಕಾರಣಕರ್ತರಾದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಅಂದ್ರು.
Advertisement
ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕುಡಿಯುವ ನೀರಿನ ಸಮಸ್ಯೆಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ ಜೊತೆಗೆ ರೈತರ ಆತ್ಮಹತ್ಯೆಯ ಬಗ್ಗೆಯೂ ಸರ್ಕಾರ ನಿರ್ಲಕ್ಷ್ಯ ವಹಿಸಿದೆ. ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ಪ್ರತಿ ದಿನ ಮೂರರಿಂದ ನಾಲ್ಕು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸರ್ಕಾರ ಅವರಲ್ಲಿ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯದ ಮೂವತ್ತು ಸಚಿವರು ಪ್ರವಾಸ ಮಾಡಿ ರೈತರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಬೇಕು. ಆದರೆ ಸರ್ಕಾರ ಮಾತ್ರ ಇದೆಲ್ಲದರಲ್ಲಿ ವಿಫಲವಾಗಿದೆ. ಸರ್ಕಾರದ ನಿರ್ಲಕ್ಷದಿಂದ ಜನ ದಿನಾಲೂ ಸಾಯುವ ತರ ಆಗಿದೆ ಅಂದ್ರು.
Advertisement
ರಾಜ್ಯದಲ್ಲಿ ತೀವ್ರ ಬರಗಾಲವಿದ್ರೂ ಸರ್ಕಾರ ಬರ ನಿರ್ವಹಣೆ ಮಾಡುವಲ್ಲಿ ವಿಫಲವಾಗಿದೆ. ಮೇವು ಸರಬರಾಜು ವಿಚಾರದಲ್ಲಿ ಭಾರೀ ಅಕ್ರಮವಾಗುತ್ತಿದೆ. ಆದರೆ ಸರ್ಕಾರ ಮಾತ್ರ ಈ ಬಗ್ಗೆ ಮುತುವರ್ಜಿ ವಹಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಗ್ರಾಮವಾಸ್ತವ್ಯ ಮಾಡಿ ಜನರ ಸಮಸ್ಯೆಯನ್ನು ನೇರವಾಗಿ ಆಲಿಸುವಂತೆ ಸಲಹೆ ನೀಡಿದ್ದೇನೆ. ಆದರೆ ಮುಖ್ಯಮಂತ್ರಿ ಮಾತ್ರ ನನ್ನ ಸಲಹೆಯನ್ನು ಸ್ವೀಕರಿಸಲೇ ಇಲ್ಲ. ಉಪಚುನಾವಣೆಗೆ ಸಿಎಂ ಹಾಗೂ ಮಂತ್ರಿಗಳು ಹೆಚ್ಚಿನ ಸಮಯವನ್ನು ನೀಡಿದ್ದು, ರಾಜ್ಯದ ಅಭಿವೃದ್ದಿಯ ಕಡೆ ಗಮನ ಹರಿಸಿಲ್ಲ. ಚುನಾವಣೆ ಗೆದ್ದ ಬಳಿಕವೂ ಹೈಕಮಾಂಡ್ ಭೇಟಿ ಮಾಡೋದರಲ್ಲೇ ಕಾಲ ಹರಣ ಮಾಡುತ್ತಿದ್ದಾರೆ ಎಂದು ಹೆಚ್‍ಡಿಕೆ ದೂರಿದರು.