ಶ್ರೀಶಾಂತ್ ಮನೆಯಲ್ಲಿ ಅಗ್ನಿ ಅವಘಡ

Public TV
1 Min Read
sreesanth 1

ತಿರುವನಂತಪುರಂ: ಭಾರತದ ತಂಡದ ಕ್ರಿಕೆಟಿಗ ಮತ್ತು ನಟ ಶ್ರೀಶಾಂತ್ ಮನೆಯಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದೆ.

ಶ್ರೀಶಾಂತ್ ಅವರ ಕೇರಳದ ಕೊಚ್ಚಿಯ ಎಡಪಲ್ಲಿ ಪ್ರದೇಶದಲ್ಲಿರುವ ಮನೆಗೆ ಇಂದು ಮುಂಜಾನೆ 2 ಗಂಟೆಯ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಈ ಘಟನೆಯಲ್ಲಿ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಗ್ನಿಶಾಮಕದಳದ ಅಧಿಕಾರಿಗಳು ಹೇಳಿದ್ದಾರೆ.

sreesanth

ಮನೆಯಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ಎಚ್ಚರಗೊಂಡ ಅಕ್ಕಪಕ್ಕದ ಮನೆಯವರು ಅಗ್ನಿಶಾಮಕದಳಕ್ಕೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ತಕ್ಷಣ ಸ್ಥಳಕ್ಕೆ ಬಂದ ಅಧಿಕಾರಿಗಳು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು ಮತ್ತು ಮನೆಯ ಗಾಜಿನ ವೆಂಟಿಲೇಟರ್ ಒಡೆದು ಮನೆಯಲ್ಲಿ ಇದ್ದವರನ್ನು ಸ್ಥಳಾಂತರ ಮಾಡಿದ್ದಾರೆ.

ಈ ಘಟನೆಯ ಬಗ್ಗೆ ಮಾತನಾಡಿರುವ ಶ್ರೀಶಾಂತ್, ನನ್ನ ಪತ್ನಿ ಮತ್ತು ಮಕ್ಕಳು ಮೊದಲನೇ ಮಹಡಿಯಲ್ಲಿ ಇದ್ದರು. ಅ ಸಮಯದಲ್ಲಿ ನೆಲಮಹಡಿಯಲ್ಲಿ ಇರುವ ಡ್ರಾಯಿಂಗ್ ರೂಮ್‍ನಲ್ಲಿ ಸೀಲಿಂಗ್ ಫ್ಯಾನ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹತ್ತಿಕೊಂಡಿದೆ. ನಾನು ಅ ಸಮಯದಲ್ಲಿ ಮನೆಯಲ್ಲಿ ಇರಲಿಲ್ಲ. ಶೂಟಿಂಗ್ ಇದ್ದ ಕಾರಣ ಮುಂಬೈಗೆ ಹೋಗಿದ್ದೆ ಎಂದು ತಿಳಿಸಿದ್ದಾರೆ.

sreesanth1

ಭಾರತದ ಪರ ಶ್ರೀಶಾಂತ್ 27 ಟೆಸ್ಟ್ ಮತ್ತು 53 ಏಕದಿನ ಪಂದ್ಯಗಳನ್ನು ಆಡಿ ಟೆಸ್ಟ್ ನಲ್ಲಿ 87 ಹಾಗೂ ಏಕದಿನದಲ್ಲಿ 75 ವಿಕೆಟ್ ಪಡೆದಿದ್ದಾರೆ. ಎರಡು ವಿಶ್ವಕಪ್ ವಿಜೇತ ಭಾರತ ತಂಡಗಳ ಭಾಗವಾಗಿರುವ ಶ್ರೀಶಾಂತ್ ಅವರನ್ನು 2013 ರ ಇಂಡಿಯನ್ ಪ್ರೀಮಿಯರ್ ಲೀಗ್‍ನಲ್ಲಿ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಭಾಗಿಯಾದ ಆರೋಪದ ಮೇಲೆ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜೀವಾವಧಿ ನಿಷೇಧ ಮಾಡಿತ್ತು.

ಈ ವಾರದ ಆರಂಭದಲ್ಲಿ, ಬಿಸಿಸಿಐ ನ್ಯಾಯಮೂರ್ತಿ (ನಿವೃತ್ತ) ಡಿಕೆ ಜೈನ್ ಅವರು ಶ್ರೀಶಾಂತ್ ಅವರ ಜೀವಾವಧಿ ನಿಷೇಧವನ್ನು ಕಡಿಮೆ ಮಾಡಿ 7 ವರ್ಷಕ್ಕೆ ಇಳಿಸಿದರು. ಈ ಮೂಲಕ ಸೆಪ್ಟೆಂಬರ್ 12, 2020 ರಂದು ಶ್ರೀಶಾಂತ್ ಅವರ ಅಮಾನತು ಕೊನೆಗೊಳ್ಳಲಿದೆ.

Share This Article
Leave a Comment

Leave a Reply

Your email address will not be published. Required fields are marked *