ಚಿಕ್ಕಬಳ್ಳಾಪುರ: ಆಕಸ್ಮಿಕ ಬೆಂಕಿ ತಗುಲಿ ಇಡೀ ಗುಡಿಸಲು ಧಗ ಧಗ ಹೊತ್ತಿ ಉರಿದಿದ್ದು, ಗುಡಿಸಲಿನಲ್ಲಿದ್ದ 4 ತಿಂಗಳ ಮಗು ಸಜೀವದಹನವಾಗಿರೋ ಹೃದಯವಿದ್ರಾವಕ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಹೋಬಳಿಯ ರಾಯನಕಲ್ಲು ಗ್ರಾಮದ ಬಳಿ ನಡೆದಿದೆ.
4 ತಿಂಗಳ ರಾಜೇಶ್ವರಿ ಮೃತ ಕಂದಮ್ಮ. ರಾಯನಕಲ್ಲು ಗ್ರಾಮದ ನಿವಾಸಿಗಳಾದ ದಿವಂಗತ ರವಿ ಹಾಗೂ ಶಶಿಕಲಾ ದಂಪತಿಯ ಮಗು ರಾಜೇಶ್ವರಿ ಅಗ್ನಿ ಅವಘಡಕ್ಕೆ ಬಲಿಯಾಗಿದೆ. ಮೂಲತಃ ಹಾವಾಡಿಗರಾದ ಶಶಿಕಲಾ ಕುಟುಂಬಸ್ಥರು ಕಳೆದ 10 ವರ್ಷಗಳಿಂದ ರಾಯನಕಲ್ಲು ಗ್ರಾಮದ ಬಳಿ ಇರುವ ಕೆರೆಯ ಪಕ್ಕದ ಬೆಟ್ಟದ ಕೆಳಗೆ ಗುಡಿಸಲು ಹಾಕಿಕೊಂಡು ಬದುಕು ಕಟ್ಟಿಕೊಂಡಿದ್ದರು.
ವಿಪರ್ಯಾಸವೆಂದರೆ ಇಂದು ಮಗುವನ್ನು ಗುಡಿಸಲಿನಲ್ಲಿ ಮಲಗಿಸಿದ್ದ ತಾಯಿ ಶಶಿಕಲಾ ಅಡುಗೆ ಮಾಡಲು ಓಲೆ ಹಚ್ಚಿದ್ದರು. ಬಳಿಕ ಅನ್ನ ಮಾಡಲು ಅಕ್ಕಿ ತರಲು ಎಂದು ಪಕ್ಕದ ಗುಡಿಸಲಿಗೆ ಹೋಗಿದ್ದಾಗ ಬೆಂಕಿ ಗುಡಿಸಲಿಗೆ ತಗುಲಿ ಇಡೀ ಗುಡಿಸಲು ಸಂಪೂರ್ಣ ಸುಟ್ಟು ಕರಕಲಾಗಿದೆ. ಹೀಗಾಗಿ ಗುಡಿಸಲಿನಲ್ಲೇ ನಿದ್ದೆ ಮಾಡುತ್ತಿದ್ದ ಮಗು ರಾಜೇಶ್ವರಿ ಸಹ ಚಿರನಿದ್ರೆಗೆ ಜಾರಿದ್ದಾಳೆ.
ಮಗುವನ್ನು ಕಳೆದುಕೊಂಡ ತಾಯಿ ಹಾಗೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಘಟನೆ ಕುರಿತು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv