ಧಾರವಾಡ: ಧಾರವಾಡದ ಕೇಂದ್ರ ಕಾರಾಗೃಹ ಅಂದ್ರೆ ಕೈದಿಗಳಿಗೆ (Prisoners) ಭಯವೇ ಇಲ್ಲದಂತಾಗಿದೆ. ಹಣ ಕೊಟ್ಟರೆ ಕಾರಾಗೃಹದಲ್ಲಿ ಎಲ್ಲವೂ ಸಿಗುತ್ತದೆ ಎಂಬ ಆರೋಪ ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಇದು ಸತ್ಯ ಎಂಬಂತೆ ಕಾರಾಗೃಹದಲ್ಲಿ ಘಟನೆಯೊಂದು ನಡೆದಿದೆ. ಕೈದಿಗಳಿಗೆ ವಾರ್ಡರ್‌ಗಳೇ (Prison Warden) ನಿಷೇಧಿತ ತಂಬಾಕು ಉತ್ಪನ್ನಗಳನ್ನ ಪೂರೈಕೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಧಾರವಾಡ ಜೈಲಿನಲ್ಲಿ (Dharwad Central Jail) ನಿಷೇಧಿತ ಉತ್ಪನ್ನಗಳ ಪೂರೈಕೆ ಹಿಂದೆ ಬೇರೆ ಯಾರೂ ಇಲ್ಲ, ಇದೇ ಕಾರಾಗೃಹದ ವಾರ್ಡರ್‌ಗಳೇ ಇದ್ದಾರೆ ಎಂಬುದು ಕುತೂಹಲಕಾರಿ ಸಂಗತಿ. ಬೇಲಿಯೇ ಎದ್ದು ಹೊಲ ಮೇಯಿತು ಎಂಬಂತೆ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ಇಬ್ಬರು ವಾರ್ಡರ್‌ಗಳು ಕೈದಿಗಳಿಗೆ ಸಿಗರೇಟು, ಗುಟ್ಕಾ ಶೀಟ್‌ಗಳನ್ನ ಪೂರೈಕೆ ಮಾಡುತ್ತಿದ್ದರು. ಕೊನೆಗೆ ಇಬ್ಬರನ್ನೂ ರೆಡ್‌ಹ್ಯಾಂಡಾಗಿ ಹಿಡಿದಿರುವ ಧಾರವಾಡ ಉಪನಗರ ಠಾಣೆ ಪೊಲೀಸರು, ಕಾರಾಗೃಹದ ಇಬ್ಬರು ವಾರ್ಡರ್ ಹಾಗೂ ಸಾಮಗ್ರಿ ಪೂರೈಸುತ್ತಿದ್ದ ಓರ್ವ ಆಟೋ ಚಾಲಕನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.

ಜೈಲಿನೊಳಗೆ ಗುಟ್ಕಾ, ಮದ್ಯ, ಮೊಬೈಲ್ ಸೇರಿದಂತೆ ಅನೇಕ ವಸ್ತುಗಳಿಗೆ ನಿಷೇಧವಿದೆ. ಕಾರಾಗೃಹ ಅಂದ್ರೆ ಒಬ್ಬ ಕೈದಿ ತಾನು ನರಕಯಾತನೆ ಅನುಭವಿಸಲು ಬಂದ ಸ್ಥಳವಿದ್ದಂತೆ. ಆದರೆ, ಧಾರವಾಡದ ಈ ಕಾರಾಗೃಹ ಕೈದಿಗಳಿಗೆ ನರಕ ಅಲ್ಲ ಸ್ವರ್ಗದಂತಾಗಿದೆ. ಈ ಕಾರಾಗೃಹದಲ್ಲಿ ವಾರ್ಡನ್ ಆಗಿ ಕೆಲಸ ಮಾಡುತ್ತಿದ್ದ ಅಲ್ತಾಫ್ ಶೇಖಸನದಿ, ರಾಜು ಸೊಲಬಣ್ಣವರ ಎಂಬುವವರೇ ಕೈದಿಗಳಿಗೆ ಗುಟ್ಕಾ ಮಾರಾಟ ಮಾಡಿ ಹೆಚ್ಚಿನ ಹಣ ಪಡೆಯುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮುನೀರ್ ಅಹ್ಮದ್ ಬೆಟಗೇರಿ ಎಂಬ ಆಟೊ ಚಾಲಕ ಗುಟ್ಕಾವನ್ನ ವ್ಯವಸ್ಥಿತವಾಗಿ ತಂದು ಜೈಲಿನ ಗೇಟ್ ಮುಂದೆ ಇಟ್ಟು ಹೋಗುತ್ತಿದ್ದ. ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಈ ಇಬ್ಬರೂ ವಾರ್ಡರ್‌ಗಳು ಕೈದಿಗಳಿಗೆ ಪೂರೈಕೆ ಮಾಡುತ್ತಿದ್ದರು. ಅಷ್ಟೇ ಅಲ್ಲ ಜೈಲಿನಲ್ಲೇ ಕ್ಯಾಂಟೀನ್ ಕೂಡ ನಡೆಸುತ್ತಿದ್ದರು.
ಮಾರ್ಚ್ 8 ರಂದು ಬೆಳಗಿನ ಜಾಗ 3 ಗಂಟೆಗೆ ಆಟೋ ಚಾಲಕ ಜೈಲಿನ ಬಾಗಿಲಿಗೆ ಚೀಲ ಒಂದು ತಂದು ಇಟ್ಟಿದ್ದ. ಅದು ಒಳಗೆ ಹೋಗಿದ್ದನ್ಬ ನೋಡಿದ್ದ ಜೈಲಾಧಿಕಾರಿ ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಿ ದೂರು ನೀಡಿದ್ದರು. ಈಗ ಹೀಗಾಗಿ ಮಾರ್ಚ್ 23ಕ್ಕೆ ದೂರು ಕೂಡಾ ದಾಖಲು ಮಾಡಿಕೊಳ್ಳಲಾಗಿತ್ತು. ಈಗ ಈ ಪ್ರಕರಣದಲ್ಲಿ ಮೂವರು ಲಾಕ್ ಆಗಿದ್ದಾರೆ. ಇದನ್ನೂ ಓದಿ: ತೈಲ ಬೆಲೆ ಏರಿಸುತ್ತಿದೆ, ಕೇಂದ್ರ ಸರ್ಕಾರ ನಮ್ಮನ್ನ ಕೊಲೆ ಮಾಡ್ತಿದೆ: ಡಿಕೆಶಿ ಕಳವಳ
ಇನ್ನೂ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ. ಕೇವಲ ತಂಬಾಕು ಉತ್ಪನ್ನಗಳನ್ನು ಮಾತ್ರ ಪೂರೈಕೆ ಮಾಡಲಾಗಿದೆಯಾ ಅಥವಾ ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳ ಪೂರೈಕೆಯೂ ನಡೆಯುತ್ತಿದೆಯಾ ಎಂಬುದರ ಬಗ್ಗೆ ಅನುಮಾನ ಇದೆ. ಈಗ ಮೊಬೈಲ್ ಏನು ಸಿಕ್ಕಿಲ್ಲ ಎಂದಿರುವ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್, ಜೈಲಾಧಿಕಾರಿ ದೂರಿನ ಮೇರೆಗೆ ಮೊಬೈಲನಲ್ಲಿ ಮಾತಾಡಿದ್ದ ಆರೋಪಿ ಮೇಲೆ ಕೂಡಾ ಪ್ರಕರಣ ದಾಖಲು ಮಾಡಿದ್ದೇವೆ. ಅಲ್ಲದೇ ಜೈಲಿನ ಅಕ್ಕಪಕ್ಕದಲ್ಲಿ ಬೆಳೆ ಇರುವ ಕಾರಣ ಜೈಲು ಕೈದಿಗಳು ಮತ್ತು ಒಳಗೆ ಜಾನುವಾರು ಸಾಕಾಣಿಕೆ ಇರುವ ಕಾರಣ ಕೆಲ ವಸ್ತು ಹೊರಗಿನಿಂರ ಹೊರಟಿವೆ ಎಂದಿದ್ದಾರೆ. ಇದನ್ನೂ ಓದಿ: ಗ್ಯಾಸ್ ಅಭಾವದ ಮಧ್ಯೆ ಚಿಕ್ಕಬಳ್ಳಾಪುರದಲ್ಲಿ 247 ಸಿಲಿಂಡರ್ ಜಪ್ತಿ

