ಬೆಂಗಳೂರು: ಕಾಂಗ್ರೆಸ್ ಶಾಸಕರು ರಾಜೀನಾಮೆ ಕೊಟ್ಟರೂ ಶಾಂತವಾಗಿರುವಂತೆ ಸಿಎಂಗೆ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಸಲಹೆ ನೀಡಿದ್ದಾರೆ.
ಶಾಸಕರ ರಾಜೀನಾಮೆಗೆ ತಲೆಕೆಡಿಸಿಕೊಳ್ಳದೆ ಆರಾಮವಾಗಿಯೇ ಅಮೆರಿಕ ಪ್ರವಾಸ ಮುಗಿಸಿಕೊಂಡು ಬರುವಂತೆ ಹೇಳಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
Advertisement
Advertisement
ಈ ಸರ್ಕಾರ ನಮಗಿಂತಲೂ ಹೆಚ್ಚು ಬೇಕಿರುವುದು ಕಾಂಗ್ರೆಸ್ಸಿಗೆ. ಅವರೇ ಮುಂದೆ ಬಂದು ಬೆಂಬಲ ನೀಡುತ್ತೇವೆ ಎಂದು ಹೇಳಿರುವುದು. ರಾಜೀನಾಮೆ ಕೊಟ್ಟಿದ್ದು ಅವರ ಶಾಸಕರೇ ಹೊರತು ನಮ್ಮವರಲ್ಲ. ದೇಶದಲ್ಲಿ ಆ ಪಕ್ಷದ ಸ್ಥಿತಿ ಹೀನಾಯವಾಗಿದೆ. ಕರ್ನಾಟಕದಲ್ಲೂ ಇರುವ ಅಧಿಕಾರ ಕಳೆದುಕೊಂಡರೆ ಅವರಿಗೆ ನಷ್ಟ. ಹೀಗಾಗಿ ಅವರ ಪಕ್ಷದೊಳಗಿನ ಬಂಡಾಯವನ್ನ ಅವರೇ ನಿಯಂತ್ರಿಸಲಿ. ನಮ್ಮ ಶಾಸಕರ ಬಗ್ಗೆಯಷ್ಟೇ ನಾವು ತಲೆಕೆಡಿಸಿಕೊಳ್ಳೋಣ ಎಂದು ಮಾಜಿ ಪ್ರಧಾನಿ ಕಿರಿಯ ಮಗನಿಗೆ ಸಲಹೆ ನೀಡಿದ್ದಾರೆ.
Advertisement
Advertisement
ನಾವು ನಮ್ಮ ಶಾಸಕರ ಬಗ್ಗೆ ಮಾತ್ರ ಚಿಂತೆ ಮಾಡೋಣ. ಹೈಕಮಾಂಡ್ ಜೊತೆ ನಾನು ಮಾತನಾಡುತ್ತೇನೆ. ಮುಂದಿನದು ಕಾಂಗ್ರೆಸ್ ನವರಿಗೆ ಬಿಡೋಣ ಎಂದು ಮಗನಿಗೆ ದೇವೇಗೌಡರು ತಿಳಿ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜಕೀಯ ತಲ್ಲಣಗಳ ಹೊರತಾಗಿಯೂ ಸಿಎಂ ಅಮೆರಿಕ ಪ್ರವಾಸ ಮೊಟಕುಗೊಳಿಸಿ ವಾಪಸ್ಸಾಗಿಲ್ಲ ಎನ್ನುವ ವಿಚಾರ ತಿಳಿದು ಬಂದಿದೆ.
ಇಂದು ಮೂವರ ರಾಜೀನಾಮೆ?
ಸೋಮವಾರ ವಿಜಯನಗರ ಶಾಸಕ ಆನಂದ್ ಸಿಂಗ್, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ್ದರು. ಮೂಲಗಳ ಪ್ರಕಾರ ಇಂದು ಮೂವರು ಶಾಸಕರು, ನಾಳೆ ಮತ್ತಿಬ್ಬರು ಶಾಸಕರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಂದು ರಾಜೀನಾಮೆ ಕೊಡಬಹುದು ಎಂದು ಊಹಿಸಲಾಗಿರುವ ಶಾಸಕರ ಪಟ್ಟಿಯಲ್ಲಿ ಹಿರೇಕೆರೂರು ಶಾಸಕ ಬಿಸಿ ಪಾಟೀಲ್, ಜಾರಕಿಹೊಳಿ ಆಪ್ತ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮತ್ತು ಕಾಗವಾಡ ಶಾಸಕ ಶ್ರೀಮಂತ ಪಾಟೀಲ್ ಹೆಸರಿದೆ.
ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ, ಮಸ್ಕಿ ಶಾಸಕ ಪ್ರತಾಪ್‍ಗೌಡ ಪಾಟೀಲ್ ಕೂಡಾ ರಾಜೀನಾಮೆ ನೀಡಬಹುದು ಎನ್ನಲಾಗುತ್ತಿದೆ. ಇಷ್ಟು ಮಂದಿಯೂ ರಾಜೀನಾಮೆ ಕೊಟ್ಟರೆ ಆಗ ಪತನ ಆಗಲಿರುವ ಕಾಂಗ್ರೆಸ್‍ನ ವಿಕೆಟ್‍ಗಳ ಸಂಖ್ಯೆ ಏಳಕ್ಕೆ ತಲುಪಲಿದೆ.