ಬೆಂಗಳೂರು: ಫಿಲ್ಮ್ ಸಿಟಿಗೆ ಏಕೋ ಕಾಲ ಕೂಡಿ ಬರುತ್ತಿಲ್ಲ. ಒಂದು ರೀತಿ ಫುಟ್ಬಾಲ್ ಸ್ಥಿತಿಯಾಗಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗಿನಿಂದಲೂ ಫಿಲ್ಮ್ ಸಿಟಿ ನಿರ್ಮಾಣ ಪ್ರಸ್ತಾಪ ಆಗುತ್ತಿದೆಯೇ ಹೊರತು, ನಿರ್ಮಾಣ ಕಾರ್ಯ ಶುರುವಾಗುತ್ತಿಲ್ಲ. ಈಗ ರಾಮನಗರದಿಂದ ಫಿಲ್ಮ್ ಸಿಟಿ ಶಿಫ್ಟ್ ಆಗುತ್ತಿದ್ದು, ಹೆಸರಘಟ್ಟದಲ್ಲಿ ನಿರ್ಮಾಣಕ್ಕೆ ರಾಜ್ಯ ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರಿನಲ್ಲಿ ಇವತ್ತು ಫಿಲ್ಮ್ ಸಿಟಿ ನಿರ್ಮಾಣ ವಿಚಾರವಾಗಿ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಡೆಯಿತು. ಈ ವೇಳೆ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ತಾಲೂಕಿನ ದೇವಿಕಾ ರಾಣಿ ರೋರಿಚ್ ಎಸ್ಟೇಟ್‍ನಲ್ಲಿ ಫಿಲ್ಮ್ ಸಿಟಿ ಮಾಡಲು ವಿರೋಧ ವ್ಯಕ್ತವಾಯಿತು. ಆಗ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟದಲ್ಲಿ ಫಿಲ್ಮ್ ಸಿಟಿ ಮಾಡಲು ಡಿಸಿಎಂ ಅಶ್ವಥ್ ನಾರಾಯಣ್ ಒಲವು ವ್ಯಕ್ತಪಡಿಸಿದರು ಎನ್ನಲಾಗಿದೆ. ಈ ವಿಚಾರವನ್ನು ಮತ್ತೊಮ್ಮೆ ಸಿಎಂ ಯಡಿಯೂರಪ್ಪ ನೇತೃತ್ವದ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Advertisement
Advertisement
ಈ ಬಗ್ಗೆ ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ದೇವಿಕಾರಾಣಿ ರೋರಿಚ್ ಎಸ್ಟೇಟ್‍ನಲ್ಲಿ ಫಿಲ್ಮ್ ಸಿಟಿ ಮಾಡುವ ಪ್ರಸ್ತಾಪ ಕೈ ಬಿಡಲಾಗಿದೆ. ಅಲ್ಲಿ ಅಂತರಾಷ್ಟ್ರೀಯ ಆರ್ಟ್ ಅಂಡ್ ಕ್ರಾಫ್ಟ್ ಸೆಂಟರ್ ಮತ್ತು ಮ್ಯೂಸಿಯಂ ಮಾಡಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಫಿಲ್ಮ್ ಸಿಟಿ ಮಾಡುವುದು ನಿಶ್ಚಿತ. ಅದಕ್ಕಾಗಿ ಬೆಂಗಳೂರು ಹೊರವಲಯದಲ್ಲಿ ಸ್ಥಳದ ಹುಡುಕಾಟ ನಡೆದಿದೆ ಎಂದು ಹೇಳಿದರು.
Advertisement
ಮಾಜಿ ಸಿಎಂ ಸಿದ್ದರಾಮಯ್ಯ ಅವರ ಸರ್ಕಾರದ ಕಾಲದಲ್ಲಿ ಮೈಸೂರಿನ ಇಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಲು ಘೋಷಣೆ ಮಾಡಲಾಗಿತ್ತು. ಬಳಿಕ ಕಾಲವೇ ಕೂಡಿ ಬರಲಿಲ್ಲ. ಬಳಿಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ಅವಧಿಯಲ್ಲಿ ಫಿಲ್ಮ್ ಸಿಟಿಯನ್ನ ರಾಮನಗರಕ್ಕೆ ಶಿಫ್ಟ್ ಮಾಡಲಾಗಿತ್ತು. ಈಗ ಬಿಜೆಪಿ ಸರ್ಕಾರ ರಾಮನಗರದಿಂದ ಹೆಸರಘಟ್ಟಕ್ಕೆ ಶಿಫ್ಟ್ ಮಾಡಲು ಪ್ಲಾನ್ ಮಾಡುತ್ತಿದೆ. ಒಟ್ಟಾರೆಯಾಗಿ ರಾಜಕೀಯ ಮೈದಾನದಲ್ಲಿ ಸಿಲುಕಿ ಫಿಲ್ಮ್ ಸಿಟಿ ಫುಟ್ಬಾಲ್ ಆಗುತ್ತಿರುವುದು ವಿಪರ್ಯಾಸವೇ ಸರಿ.