ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆ ದಿನೆದಿನೇ ರಂಗೇರುತ್ತಿದ್ದು, ಬೊಂಬೆನಗರಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಬುಧವಾರ ಸ್ಯಾಂಡಲ್ ವುಡ್ನ ನಟ-ನಟಿಯರು ಕಾಂಗ್ರೇಸ್ ಅಭ್ಯರ್ಥಿ ಎಚ್.ಎಂ ರೇವಣ್ಣ ಪರ ರೋಡ್ ಶೋ ನಡೆಸಿ ಮತಯಾಚನೆ ನಡೆಸಿದ್ದಾರೆ.
ನಟರಾದ ಅನೂಪ್ ರೇವಣ್ಣ, ಬಿಗ್ ಬಾಸ್ ವಿನ್ನರ್ ಪ್ರಥಮ್, ಕೋಟೆ ಪ್ರಭಾಕರ್, ನಟಿಯರಾದ ಮಯೂರಿ, ರೂಪಿಕಾ ಹಾಗೂ ನಿರ್ದೇಶಕ ಆರ್. ಚಂದ್ರ ಚನ್ನಪಟ್ಟಣದಲ್ಲಿ ರೋಡ್ ಶೋ ನಡೆಸಿ ರೇವಣ್ಣ ಪರ ಮತಯಾಚನೆ ನಡೆಸಿದ್ದಾರೆ.
ನಗರದ ಮಂಗಳವಾರ ಪೇಟೆಯಿಂದ ಭೈರಾಪಟ್ಟಣದವರೆಗೆ ರೋಡ್ ಶೋ ನಡೆಸಿದ್ದು, ಇದೇ ವೇಳೆ ಮಾತನಾಡಿದ ಪ್ರಥಮ್, ಚನ್ನಪಟ್ಟಣದಲ್ಲಿ ಸತತವಾಗಿ 20 ವರ್ಷಗಳಿಂದ ಯೋಗೇಶ್ವರ್ ಆಯ್ಕೆಯಾಗುತ್ತಲೇ ಬಂದಿದ್ದಾರೆ. ಈ ಬಾರಿ ಅವರು ರಾಜಕೀಯದಿಂದ ವಿಶ್ರಾಂತಿ ಪಡೆಯಲಿ, ಇನ್ನೂ ಎಚ್.ಡಿ ಕುಮಾರಸ್ವಾಮಿಯವರು ಎರಡೂ ಕಡೆ ಸ್ಪರ್ಧಿಸಿರುವುದರಿಂದ ಹಣ ಪೋಲಾಗಲಿದೆ. ಈ ಬಾರಿ ಎಚ್.ಎಂ ರೇವಣ್ಣಗೆ ಒಂದು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ನಟಿ ಮಯೂರಿ ಕೂಡಾ ರೇವಣ್ಣರನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.