ಚಡ್ಡಿ, ಪಠ್ಯ, ಧರ್ಮ ದಂಗಲ್ ಮಧ್ಯೆ ಬೆಂಗಳೂರು ಅನಾಥ – ಜನಸಾಮಾನ್ಯರಿಗೆ ಗುಂಡಿ ರಸ್ತೆ
- ಜನಪ್ರತಿನಿಧಿಗಳ ಮನೆ ಮುಂದೆ ಹೈಕ್ಲಾಸ್ ರೋಡ್

ಬೆಂಗಳೂರು: ದಿನ ಬೆಳಗಾದರೆ ಸಾಕು ಒಂದೆಡೆ ಆಡಳಿತ ಪಕ್ಷ, ಮತ್ತೊಂದು ಕಡೆ ವಿಪಕ್ಷಗಳು ಹಿಜಬ್, ಮೈಕ್, ಧರ್ಮ ದಂಗಲ್, ಚಡ್ಡಿ ವಾರ್, ಪಠ್ಯ ಪುಸ್ತಕ ಪರಿಷ್ಕರಣೆ ಫೈಟ್ ಅಂತ ಜಪಾಪಟಿಗೆ ಇಳಿಯುತ್ತಾರೆ. ಆದರೆ ಕರ್ನಾಟಕದ ಜೀವನಾಡಿ ರಾಜಧಾನಿ ಬೆಂಗಳೂರನ್ನೇ ಮರೆತುಬಿಟ್ಟಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಜವಾಬ್ದಾರಿಯುತ ಸ್ಥಾನದಲ್ಲಿರುವ ರಾಜಕೀಯ ನಾಯಕರು ಬೆಂಗಳೂರು ನಗರದ ಅಭಿವೃದ್ಧಿ ಕಡೆ ಗಮನ ಹರಿಸಿದೆ ಅನಾಥ ಮಾಡಿದ್ದಾರೆ. ಚಡ್ಡಿಗೆ ಸಿಕ್ಕಷ್ಟು ಪ್ರಾಮುಖ್ಯತೆ ಕೂಡ ವಿಶ್ವಪ್ರಸಿದ್ಧ ಬೆಂಗಳೂರಿಗೆ ಇಲ್ಲದಂತಾಗಿದೆ. ಪರಿಣಾಮ ಎಲ್ಲೆಲ್ಲೂ ಸಮಸ್ಯೆಗಳ ಸರಮಾಲೆ. ನಿತ್ಯ ಸಾವಿರಾರು ಜನ ಓಡಾಡುವ ಕೆಂಗೇರಿಯ ರೋಡ್ ವೀಡಿಯೋ ಮಾತ್ರ ವೈರಲ್ ಆಗಿದೆ. ಉಳಿದಂತೆ ಉದ್ಯಾನ ನಗರಿಯ ಶೇ.60ರಷ್ಟು ರಸ್ತೆಗಳು ಗುಂಡಿಗಳಿಂದಲೇ ತುಂಬಿವೆ.
ಗುಂಡಿಗಳಿಂದಾಗಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರ 4 ವರ್ಷದಲ್ಲಿ ರಸ್ತೆಗುಂಡಿಗೆ ಅಂತ 168.2 ಕೋಟಿ ಸುರಿದಿದ್ದೇವೆ ಅಂತ ಲೆಕ್ಕ ಹೇಳುತ್ತಿದೆ. ಆದರೆ ಇದು ನಿಜವಾಗಿಯೂ ರಸ್ತೆ ಗುಂಡಿಗೆ ಹೋಯಿತಾ? ಗುತ್ತಿಗೆ, ಅಧಿಕಾರಿಗಳು, ಜನಪ್ರತಿನಿಧಿಗಳ ಜೇಬಿಗೆ ಹೋಗಿದೆಯಾ ಎಂಬುವುದು ಕೂಡ ತಿಳಿದಿಲ್ಲ. ಇದನ್ನೂ ಓದಿ: ಶಸ್ತ್ರ ಚಿಕಿತ್ಸೆ ಹೊಲಿಗೆ ಬಿಚ್ಚಿಕೊಂಡು ಬಾಣಂತಿಯರ ಪರದಾಟ ಪ್ರಕರಣ – ವೈದ್ಯಾಧಿಕಾರಿಗಳ ವಿರುದ್ಧ FIR
ಕಾರ್ಪೊರೇಟರ್‍ಗಳನ್ನು ಕೇಳೋಣ ಅಂದರೆ ಎಲೆಕ್ಷನ್ ನಡೆದಿಲ್ಲ. ಉಸ್ತುವಾರಿ ಕೇಳೋಣ ಅಂದರೆ ಸಿಎಂ ಕೈಗೆ ಸಿಕ್ಕಲ್ಲ. ಬೆಂಗಳೂರು ಸಚಿವರನ್ನು ಪ್ರಶ್ನಿಸಿದರೆ, ಎಲ್ಲಾ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಜನ ಸಾಮಾನ್ಯರು ಓಡಾಡುವ ರಸ್ತೆ ಮಾತ್ರ ಅಧ್ವಾನ ಆಗಿದ್ದು, ಸಿಎಂ-ಸಚಿವರ ಮನೆ ಮುಂದಿರುವ ರಸ್ತೆ ಮಾತ್ರ ಅಚ್ಚುಕಟ್ಟಾಗಿದೆ. ಇದನ್ನೂ ಓದಿ: ಬೆಂಗಳೂರು ಟೆಕ್ ಸಮ್ಮಿಟ್ ಬೆಳ್ಳಿ ಹಬ್ಬ – ಉದ್ಘಾಟನೆಗೆ ಪ್ರಧಾನಿ ಆಹ್ವಾನ: ಅಶ್ವಥ್ ನಾರಾಯಣ
ಕಳೆದ 4 ವರ್ಷದಲ್ಲಿ 3 ಮುಖ್ಯಮಂತ್ರಿಗಳನ್ನು ಬೆಂಗಳೂರಿನ ರಸ್ತೆಗಳು ನೋಡಿಬಿಟ್ಟಿವೆ. ಈ 3 ಮುಖ್ಯಮಂತ್ರಿಗಳು ರಸ್ತೆ ಗುಂಡಿ ಮುಚ್ಚುವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ.
ರಸ್ತೆ ಗುಂಡಿಗೆ ಹಾಕಿದ ಹಣವೆಷ್ಟು?
ವರ್ಷ ವೆಚ್ಚ
2017-18 : 47.8 ಕೋಟಿ
2018-19 : 49.2 ಕೋಟಿ
2019-20 : 54.8 ಕೋಟಿ
2020-21 : 16.4 ಕೋಟಿ
ಒಟ್ಟು : 168.2 ಕೋಟಿ
ಬೆಂಗಳೂರಿನ ಟಾಪ್ 5 ಸಮಸ್ಯೆಗಳು
1. ಬಲಿಗಾಗಿ ಕಾಯುತ್ತಿರುವ ಯಮಗುಂಡಿಗಳು
2. ಸಣ್ಣ ಮಳೆಯಾದ್ರೂ ಮುಳುಗುವ ಬೆಂಗಳೂರು
3. ರಾಜಕಾಲುವೆ ನಿರ್ವಹಣೆ ಮರೆತ ಬಿಬಿಎಂಪಿ
4. ಕಸದ ನಿರ್ವಹಣೆ ಕೊರತೆ
5. ಕುಡಿಯುವ ನೀರಿಗೂ ಪರದಾಟ
ಇವರೇ ಬೆಂಗಳೂರಿನ ಮಂತ್ರಿಗಳು:
* ಬಸವರಾಜ ಬೊಮ್ಮಾಯಿ, ಸಿಎಂ – ಬೆಂಗಳೂರು ಉಸ್ತುವಾರಿ ಸಚಿವರು
* ಆರ್.ಅಶೋಕ್, ಕಂದಾಯ ಸಚಿವ – ಬೆಂಗಳೂರು ದಕ್ಷಿಣ ವಲಯ ಉಸ್ತುವಾರಿ
* ವಿ.ಸೋಮಣ್ಣ, ವಸತಿ ಸಚಿವ – ಬೆಂಗಳೂರು ಪಶ್ಚಿಮ ವಲಯ ಉಸ್ತುವಾರಿ
* ಡಾ.ಅಶ್ವಥ್ ನಾರಾಯಣ, ಉನ್ನತ ಶಿಕ್ಷಣ ಸಚಿವ – ಬೆಂಗಳೂರು ಪೂರ್ವ ವಲಯ ಉಸ್ತುವಾರಿ
* ಮುನಿರತ್ನ, ತೋಟಗಾರಿಕೆ ಸಚಿವ – ಯಲಹಂಕ ವಲಯ+ದಾಸರಹಳ್ಳಿ ವಲಯ
* ಬೈರತಿ ಬಸವರಾಜು, ನಗರಾಭಿವೃದ್ಧಿ ಸಚಿವ – ಮಹದೇವಪುರ ವಲಯ ಉಸ್ತುವಾರಿ
* ಗೋಪಾಲಯ್ಯ, ಅಬಕಾರಿ ಸಚಿವ – ಬೊಮ್ಮನಹಳ್ಳಿ ವಲಯ ಉಸ್ತುವಾರಿ
* ಎಸ್.ಟಿ.ಸೋಮಶೇಖರ್, ಸಹಕಾರ ಸಚಿವ – ರಾಜರಾಜೇಶ್ವರಿ ನಗರ ವಲಯ ಉಸ್ತುವಾರಿ