ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ವಿಚಾರ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ವಿಚಾರಣೆ ನಡೆಸಿದ ಹೈಕೋರ್ಟ್ ಎಲ್ಲೆಂದರಲ್ಲಿ ಕಸ ಹಾಕಿದರೆ ಅಂತಹವರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ಆದೇಶಿಸಿದೆ.
ಪಿಐಎಲ್ ಅರ್ಜಿ ವಿಚಾರಣೆ ನಡೆಸಿ ಬಿಬಿಎಂಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದ ನ್ಯಾಯಾಲಯಕ್ಕೆ ಇಂದು ಬಿಬಿಎಂಪಿ ಪರ ವಕೀಲರು ಕಸ ವಿಲೇವಾರಿಗೆ ಸಂಬಂಧಿಸಿದಂತೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. 48 ಗಂಟೆಗಳ ಹಿಂದಿನವರೆಗಿನ ಕಸ ವಿಲೇವಾರಿ ಮಾಡಿದ್ದೇವೆ. ಆದರೆ ಸ್ವಚ್ಛಗೊಳಿಸಿ ರಂಗೋಲಿ ಬಿಡಿಸಿದ ಸ್ಥಳದಲ್ಲೂ ಕೆಲ ಮಂದಿ ಮತ್ತೆ ಕಸ ಹಾಕಿದ್ದಾರೆ. ಇಂತಹ ಸ್ಥಳಗಳಲ್ಲಿ ಕಸ ಹಾಕುವ 50 ಜನರಿಗೆ ದಂಡ ಹಾಕಿದ್ದೇವೆ ಎಂದು ತಿಳಿಸಿದ್ದರು.
Advertisement
Advertisement
ವಕೀಲರ ಮಾಹಿತಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ಮತ್ತು ನ್ಯಾ.ಎಸ್.ಸುಜತಾ ಅವರಿದ್ದ ಪೀಠ ಕಸ ಹಾಕುವ ಜನರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು. ಕಸ ಹಾಕಿದವರನ್ನು ಗುರುತಿಸಿದ್ದೀರಾ? ಬೀಟ್ ಪೊಲೀಸರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದ ನ್ಯಾಯಾಲಯ ಸ್ವಚ್ಛಗೊಳಿಸಿದ ಸ್ಥಳದಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಬಿಬಿಎಂಪಿ ಹಾಗೂ ನಗರ ಪೊಲೀಸರಿಗೆ ಹೈಕೋರ್ಟ್ ಸೂಚನೆ ನೀಡಿತು. ಅಷ್ಟೇ ಅಲ್ಲದೇ ಪೌರಕಾಯ್ದೆಯ ಅನ್ವಯ ಕಸ ಹಾಕಿದವರ ವಿರುದ್ಧ ದೂರು ದಾಖಲಿಸಲು ಸೂಚನೆ ನೀಡಿತು.
Advertisement
Advertisement
ಕಸ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು. ಕೇವಲ ಉತ್ತರ ನೀಡುವುದರಿಂದ ಸಮಸ್ಯೆ ಬಗೆ ಹರಿಯುವುದಿಲ್ಲ. ನಿಮ್ಮ ಸಹಾಯಕ್ಕೆ ಬೇಕಾದರೆ ಪೋಲೀಸರನ್ನು ಸಹ ತೆಗೆದುಕೊಳ್ಳಿ ಎಂದು ಹೇಳಿ ಮುಂದಿನ ವಿಚಾರಣೆಯನ್ನು ಪೀಠ ನವೆಂಬರ್ 15ಕ್ಕೆ ಮುಂದೂಡಿತು.
ಹೈಕೋರ್ಟ್ ಆದೇಶದ ಕುರಿತು ಪ್ರತಿಕ್ರಿಯೆ ನೀಡಿದ ಬಿಬಿಎಂಪಿ ಆಡಳಿತ ಪಕ್ಷ ನಾಯಕ ಶಿವರಾಜ್, ಪಾಲಿಕೆ ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಿದ್ದು, ಬ್ಲಾಕ್ ಸ್ಟಾಟ್ ನಲ್ಲಿ ಕಸ ಹಾಕಿದವರ ಮಾಹಿತಿ ಪೊಲೀಸರಿಗೆ ನೀಡುತ್ತೇವೆ. ಹೈಕೋರ್ಟ್ ನಿರ್ದೇಶನದ ಕಸ ಮುಕ್ತ ನಗರವನ್ನಾಗಿ ಮಾಡಲು ಪಾಲಿಕೆಗೆ ಸಹಾಯ ಆಗಲಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv