ಚಿತ್ರದುರ್ಗ: ವೈಯಕ್ತಿಕ ಸ್ವಾರ್ಥ ಹಾಗೂ ರಾಜಕೀಯ ದ್ವೇಷದಿಂದಾಗಿ ಕರ್ನಾಟಕ ರಕ್ಷಣಾ ವೇದಿಕೆ ಬಣಗಳ ಮುಖಂಡರ ನಡುವೆ ಘರ್ಷಣೆ ನಡೆದಿರುವ ಘಟನೆ ಚಿತ್ರದುರ್ಗದ ಗೋಪಾಲಪುರ ಬಡಾವಣೆಯಲ್ಲಿ ನಡೆದಿದೆ.
ನೀರಿನ ಪೈಪ್ ಲೈನ್ ಅಳವಡಿಕೆ ವಿಚಾರವನ್ನ ನೆಪವಾಗಿಸಿಕೊಂಡು ನಾರಾಯಣಗೌಡ ಬಣದ ಕರವೇ ಅಧ್ಯಕ್ಷ ರಮೇಶ್ ಹಾಗು ಶಿವರಾಮೇಗೌಡ ಬಣದ ಕರವೇ ಅಧ್ಯಕ್ಷ ಮಂಜುನಾಥ್ ನಡುವೇ ಮಾತಿನ ಚಕಮಕಿ, ವಾಗ್ವಾದ ನಡೆದಿದ್ದು ಕೈ ಕೈ ಮಿಲಾಯಿಸೋ ಹಂತಕ್ಕೆ ತಲುಪಿದೆ.
ರಮೇಶ್ ಪತ್ನಿ ಅನಿತಾ, ಗೋಪಾಲಪುರ ಬಡಾವಣೆಯ ನಗರಸಭೆ ಸದಸ್ಯೆಯಾಗಿದ್ದಾರೆ. ಕಳೆದ ನಗರಸಭೆ ಚುನಾವಣೆಯಲ್ಲಿ ಮಂಜುನಾಥ್ ಪತ್ನಿ ಸೋತಿದ್ದರು. ಜೊತೆಗೆ ನಾರಾಯಣ ಗೌಡ ಬಣದಿಂದ ಉಚ್ಛಾಟನೆಗೊಂಡು ಶಿವರಾಮೇಗೌಡ ಬಣ ಸೇರಿದ್ದ ಮಂಜುನಾಥ್ ಹಾಗೂ ರಮೇಶ್ ನಡುವೆ ಭಾರೀ ದ್ವೇಷ ಹುಟ್ಟಿ ಹಾಕಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ ವಿರುದ್ಧ ಮಂಜುನಾಥ್ ಮಧ್ಯೆ ರಾಜಕೀಯ ಹಾಗೂ ವೈಯಕ್ತಿಕ ದ್ವೇಷ ಒಳಗೊಳಗೆ ಹೊಗೆಯಾಡುತ್ತಿತ್ತು.
ಹೀಗಾಗಿ ಇಂದು ಪೈಪ್ ಲೈನ್ ನೆಪದಲ್ಲಿ ಈ ಸಿಟ್ಟು ಸ್ಫೋಟಗೊಂಡಿದ್ದು ಇಬ್ಬರೂ ಕರವೇ ಅಧ್ಯಕ್ಷರುಗಳು ಹಾಗೂ ಕಾರ್ಯಕರ್ತರು ಬೀದಿಯಲ್ಲಿ ಬಡಿದಾಡಿಕೊಂಡು ಆಸ್ಪತ್ರೆ ಸೇರಿದ್ದಾರೆ.
ಈ ಘಟನೆ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.