ಕೋಲಾರ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಐದು ತಿಂಗಳ ಗರ್ಭಿಣಿ ಹಲ್ಲೆಯಾದ ಪರಿಣಾಮ ಗರ್ಭಪಾತವಾಗಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ತಾಲೂಕು ನೆರ್ನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ವರಲಕ್ಷ್ಮಿ ಹಲ್ಲೆಗೊಳಗಾಗಿ ಗರ್ಭಪಾತವಾದ ಗರ್ಭಿಣಿ. ಗ್ರಾಮದಲ್ಲಿ ನಡೆದ ಗಲಾಟೆಯಲ್ಲಿ ತಮ್ಮ ಮನೆ ಬಳಿ ಇದ್ದ ವೇಳೆ ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯ ಐದು ಜನರು ಎರಡು ದಿನಗಳ ಹಿಂದೆ ಹಲ್ಲೆ ಮಾಡಿದ್ದಾರೆ.
ಹಲ್ಲೆ ಮಾಡಿದ ಪರಿಣಾಮ ವರಲಕ್ಷ್ಮಿ ಕೋಲಾರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಐದು ತಿಂಗಳ ಮಗು ಹೊರ ಪ್ರಪಂಚ ನೋಡದೆ ಹೊಟ್ಟೆಯಲ್ಲೆ ಪ್ರಾಣ ಬಿಟ್ಟಿದೆ. ಈ ಕುರಿತು ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಕೋರರಾದ ಪಾಪಣ್ಣ, ಆನಂದ್, ಹರೀಶ್ ಸೇರಿದಂತೆ ಇತರೆ ಐದು ಜನರನ್ನ ಬಂಧಿಸಿದ್ದಾರೆ.