ನವದೆಹಲಿ: ವಿಧಾನಸಭೆ ಚುನಾವಣೆಯಲ್ಲಿ (Assembly Election) ಗೆಲುವು ಸಾಧಿಸಿದ ಬಿಜೆಪಿಯಲ್ಲಿ (BJP) ಮುಖ್ಯಮಂತ್ರಿ ಆಯ್ಕೆ ಕಸರತ್ತು ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅಮೇರಿಕಾ ಪ್ರವಾಸದಿಂದ ವಾಪಸ್ ಆದ ಬೆನ್ನಲ್ಲೇ ಸಿಎಂ ಸೇರಿದಂತೆ ಇತರೆ ಸಚಿವ ಸಂಪುಟ ರಚನೆ ಬಗ್ಗೆ ಸಭೆ ನಡೆದಿದೆ.
ಪಕ್ಷದ ಶಾಸಕಾಂಗ ಸಭೆಯ ನಂತರ ಫೆಬ್ರವರಿ 19ರಂದು ದೆಹಲಿಯ ಮುಖ್ಯಮಂತ್ರಿಯನ್ನು ಬಿಜೆಪಿ ಘೋಷಿಸುವ ಸಾಧ್ಯತೆಯಿದೆ. ಫೆಬ್ರವರಿ 20ರಂದು ರಾಮಲೀಲಾ ಮೈದಾನದಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಸುತ್ತಿಗೆಯಿಂದ ತಲೆ ಒಡೆದು ಅತ್ತೆಯನ್ನು ಹತ್ಯೆಗೈದ ಅಳಿಯ!
ವಿಧಾನಸಭಾ ಚುನಾವಣೆಯಲ್ಲಿ ಗೆದ್ದ 48 ಬಿಜೆಪಿ ಶಾಸಕರ ಪೈಕಿ 15 ಹೆಸರುಗಳನ್ನು ಶಾರ್ಟ್ಲಿಸ್ಟ್ ಮಾಡಲಾಗಿದೆ. ಅದರಲ್ಲಿ ಒಂಬತ್ತು ಜನರನ್ನು ಮುಖ್ಯಮಂತ್ರಿ, ರಾಜ್ಯ ಕ್ಯಾಬಿನೆಟ್ ಸಚಿವರು ಮತ್ತು ಸ್ಪೀಕರ್‌ನಂತಹ ಪ್ರಮುಖ ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು ಎಂದು ಪಕ್ಷದ ಹಿರಿಯ ನಾಯಕರು ತಿಳಿಸಿದ್ದಾರೆ.
ಸದ್ಯ ಮುಖ್ಯಮಂತ್ರಿ ಹುದ್ದೆ ರೇಸ್‌ನಲ್ಲಿ ಹಲವು ನಾಯಕರು ಮುಂಚೂಣಿಯಲ್ಲಿದ್ದಾರೆ. ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ, ಕೇಂದ್ರ ನಾಯಕರೊಂದಿಗಿನ ನಿಕಟ ಸಂಬಂಧಗಳಿಗೆ ಹೆಸರುವಾಸಿಯಾದ ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಶಿಶ್ ಸೂದ್, ಪ್ರಮುಖ ಮಹಿಳಾ ಮುಖ ರೇಖಾ ಗುಪ್ತಾ, ಹಿರಿಯ ಬಿಜೆಪಿ ನಾಯಕ ಮತ್ತು ದೆಹಲಿ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ವಿಜೇಂದರ್ ಗುಪ್ತಾ, ಪ್ರಮುಖ ಬ್ರಾಹ್ಮಣ ನಾಯಕ ಮತ್ತು ಮಾಜಿ ರಾಜ್ಯಾಧ್ಯಕ್ಷ ಸತೀಶ್ ಉಪಾಧ್ಯಾಯ, ವೈಶ್ಯ ಸಮುದಾಯದ ಪ್ರಬಲ ಮತ್ತು ಆರ್‌ಎಸ್‌ಎಸ್ ಪ್ರತಿನಿಧಿ ಜಿತೇಂದ್ರ ಮಹಾಜನ್ ಹೆಸರು ಚಾಲ್ತಿಯಲ್ಲಿದೆ.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ಪರ್ವೇಶ್ ವರ್ಮಾ, ನಾನು ಆಧ್ಯಾತ್ಮಿಕ ವ್ಯಕ್ತಿ. ಹಾಗಾಗಿ ನಾನು ಹೆಚ್ಚು ಸಂತೋಷಪಡುವುದಿಲ್ಲ ಮತ್ತು ಹೆಚ್ಚು ದುಃಖಿಸುವುದಿಲ್ಲ. ಪಕ್ಷದ ಹೈಕಮಾಂಡ್ ಏನು ನಿರ್ಧರಿಸಿದರೂ, ನಾನು ಅದನ್ನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದು ಹೇಳಿದ್ದಾರೆ.ಇದನ್ನೂ ಓದಿ: ಚೀನಾ ನಮ್ಮ ಶತ್ರು ದೇಶವಲ್ಲ: ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡಾ