ಘತ್ತರಗಾ, ಗಾಣಗಾಪುರ ಸೇತುವೆ ಮೇಲೆ ನೀರು – 2 ದಿನ ರಸ್ತೆ ಸಂಚಾರಕ್ಕೆ ನಿರ್ಬಂಧ

Public TV
1 Min Read
Fattartaga and Gangapur Bridge Submerges After Sonna Barrage Releases Water 1

ಕಲಬುರಗಿ: ಭೀಮಾ ನದಿಯಲ್ಲಿ (Bhima River) ನೀರಿನ ಪ್ರಮಾಣ ಹೆಚ್ಚಾಗಿದ್ದು ಘತ್ತರಗಾ ಮತ್ತು ಗಾಣಗಾಪೂರ (Fattartaga and Gangapur) ಸೇತುವೆ ಮೇಲೆ ನೀರು ಹರಿಯುತ್ತಿದೆ.

ಮಹಾರಾಷ್ಟ್ರದ ಉಜ್ಜನಿ ಮತ್ತು ವೀರ್ ಜಲಾಶಯದಿಂದ ಸೋಮವಾರ ಭೀಮಾ ನದಿಗೆ ಹರಿಬಿಡಲಾದ ಸುಮಾರು 1 ಲಕ್ಷಕ್ಕೂ ಹೆಚ್ಚಿನ ಕ್ಯುಸೆಕ್‌ ನೀರು ಬುಧವಾರ ತಡರಾತ್ರಿ ಅಫಜಲ್ಪುರ ತಾಲೂಕಿನ ಸೊನ್ನ ಬ್ರಿಡ್ಜ್ ಮೂಲಕ ಜಿಲ್ಲೆಯ ಭೀಮಾ ನದಿಗೆ ಪ್ರವೇಶಿಸಿದೆ. ಇದರಿಂದಾಗಿ ಅಫಜಲ್ಪುರ ತಾಲೂಕಿನ ಘತ್ತರಗಾ ಹಾಗೂ ಗಾಣಗಾಪುರ ಸೇತುವೆ ಮೇಲೂ ನೀರು ಹರಿಯುತ್ತಿದ್ದು ಗುರುವಾರ ಮತ್ತು ಶುಕ್ರವಾರ ಸೇತುವೆ ಮೇಲಿನ ಸಂಚಾರವನ್ನು ಜಿಲ್ಲಾಡಳಿತ ನಿರ್ಬಂಧಿಸಿದೆ.

Fattartaga and Gangapur Bridge Submerges After Sonna Barrage Releases Water 2

ಅಫಜಲ್ಪುರ ತಾಲೂಕಿನ ಘತ್ತರಗಾ-ಜೇರಟಗಿ ಮತ್ತು ಗಾಣಗಾಪುರ-ಇಟಗಾ ಸಂಪರ್ಕ ಕಲ್ಪಿಸುವ ಈ ಎರಡು ಸೇತುವೆ ಬಳಿ ಪೊಲೀಸ್ ಸಿಬ್ಬಂದಿ ಠಿಕಾಣಿ ಹೂಡಿದ್ದು, ತಡರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದಂತೆ ಮುಂಜಾಗ್ರತೆಯ ಕ್ರಮವಾಗಿ ಬ್ಯಾರಿಕೇಡ್ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸ್ಥಳೀಯ ನಿವಾಸಿಗಳು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮನವಿ ಮಾಡಿದ್ದಾರೆ.

ಭೀಮಾ ನದಿಗೆ ತಡರಾತ್ರಿ ಅಪಾರ ನೀರು ಬಂದು ರಸ್ತೆ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಗ್ರಾಮಗಳಲ್ಲಿ ರಕ್ಷಣಾ ಕಾರ್ಯಚರಣೆ ಮತ್ತು ಕಾಳಜಿ ಕೇಂದ್ರ ತೆರೆಯಲು ಮೇಲುಸ್ತುವಾರಿಗೆ ನೇಮಿಸಿದ ಅಫಜಲ್ಪುರ, ಕಲಬುರಗಿ ಹಾಗೂ ಜೇವರ್ಗಿ ತಂಡದ ನೋಡಲ್ ಅಧಿಕಾರಿಗಳು ಎಚ್ಚರದಿಂದಿರಲು ಮತ್ತು ಕೂಡಲೇ ಪ್ರವಾಹಕ್ಕೆ ತುತ್ತಾದ ಗ್ರಾಮಗಳಿಗೆ ಭೇಟಿ ನೀಡಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

 

ಅಲ್ಲದೆ ತಾಲೂಕಿನ ತಹಶೀಲ್ದಾರರು, ತಾಲೂಕು ಪಂಚಾಯತ್ ಇ.ಓ ಹಾಗೂ ಪೊಲೀಸ್ ಇಲಾಖೆಯು ನೋಡಲ್ ಅಧಿಕಾರಿಗಳೊಂದಿಗೆ ಸತತ ಸಂಪರ್ಕ ಸಾಧಿಸಿ ಪ್ರವಾಹದಿಂದ ಯಾವುದೇ ಜನ, ಜಾನುವಾರು ಜೀವ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ಡಿಸಿ ಅವರು ತಿಳಿಸಿದ್ದಾರೆ.

Share This Article