ಅಹಮದಾಬಾದ್: ಪತಿ ನಪುಂಸಕನಾದ ಹಿನ್ನೆಲೆಯಲ್ಲಿ ಮಾವನೇ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಮಹಿಳೆಯೊಬ್ಬರು ಗುಜರಾತಿನ ಅಹಮದಾಬಾದ್ ಸರ್ದಾರ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.
ನನ್ನ ಪತಿ ನಪುಂಸಕ. ವಂಶ ಬೆಳೆಯಬೇಕೆಂದು ನನ್ನ ಮಾವ ಹಾಗೂ ನನ್ನ ಮೈದುನ ದೈಹಿಕ ಸಂಬಂಧ ಬೆಳೆಸುವಂತೆ ನನಗೆ ಒತ್ತಾಯಿಸುತ್ತಿದ್ದಾರೆ. ನನ್ನ ಅತ್ತೆ ಜೊತೆ ಸೇರಿ ನನ್ನ ಮಾವ ಹಾಗೂ ಮೈದುನ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಮಾತನ್ನು ನನ್ನ ಗಂಡನಿಗೆ ಹೇಳಿದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.
ನನ್ನ ಮದುವೆಯಾಗಿ 4 ವರ್ಷಗಳಾಗಿದ್ದು, ಸಂತಾನ ಪ್ರಾಪ್ತಿಯಾಗಲಿಲ್ಲ. ಈ ಕಾರಣಕ್ಕಾಗಿ ಮಾವ ಹಾಗೂ ಮೈದುನ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದ್ದರು ಎಂದು ನೊಂದ ಮಹಿಳೆ ತಿಳಿಸಿದ್ದಾರೆ.
ಒಂದು ದಿನ ನನ್ನ ಮಾವ, ಮೈದುನ ಬಂದು ನನ್ನ ರೂಮಿಗೆ ನುಗ್ಗಿದ್ದಾರೆ. ನನ್ನ ಕೈ ಕಾಲು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ್ದಾಗ ನನ್ನ ಮಾವ ಹಾಗೂ ನನ್ನ ಮೈದುನ ಸೇರಿ ನನ್ನ ಬೆರಳನ್ನೇ ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ತಲೆ ಕೂದಲನ್ನು ಸಹ ಕತ್ತರಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ಈ ಕೃತ್ಯಕ್ಕೆ ನನ್ನ ಅತ್ತೆ ಕೂಡ ಸಾಥ್ ನೀಡಿದ್ದು, ಅವರು ನನಗೆ ಮಂಗಳಮುಖಿ ಎಂದು ಕರೆಯುತ್ತಾರೆ. ಈಗ ನನ್ನ ತಾಯಿಯನ್ನು ಕೊಲೆ ಮಾಡುವುದ್ದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಷಯದ ಬಗ್ಗೆ ನನ್ನ ಪತಿಗೆ ಹೇಳಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುತ್ತಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.
ಸದ್ಯ ಮಹಿಳೆ ಪತಿ ಮನೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.