ವಿಜಯಪುರ: ಮಗಳ ಪ್ರೀತಿಗೆ ವಿರೋಧಿಸಿ ತಂದೆಯೇ ಮಗಳಿಗೆ ಮಾರಕಾಸ್ತ್ರಗಳಿಂದ ಇರಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ನಡೆದಿದೆ.
ಶಂಕರ್ ಚವ್ಹಾಣ್ ಮಗಳಿಗೆ ಇರಿದ ತಂದೆ. ಸಂಬಂಧದಲ್ಲಿ ಕರಿಷ್ಮಾಳಾ ಅಣ್ಣನ ಮಗ ಆಗಬೇಕಾದ ಅರುಣ್ ಎಂಬವನ ಜೊತೆ ಕರಿಷ್ಮಾಳ ಪ್ರೇಮ ನಡೆದಿತ್ತು. ಈ ವಿಷಯ ಎರಡು ಮನೆಯವರಿಗೂ ತಿಳಿದಿತ್ತು. ಆಗ ಎರಡು ಕುಟುಂಬದವರು ತಮ್ಮ ಮಕ್ಕಳಿಗೆ ಬುದ್ಧಿ ಹೇಳಿ ಇದನ್ನು ಮುಂದುವರಿಸದಿರಲು ತಾಕೀತು ಮಾಡಿದ್ದರು. ಆದರೆ ಇದಕ್ಕೆ ಕ್ಯಾರೇ ಅನ್ನದ ಇಬ್ಬರು ಮತ್ತೆ ಕದ್ದು ಕದ್ದು ಭೇಟಿ ಆಗುತ್ತಿದ್ದರು.
ಅದೇ ರೀತಿ ಜುಲೈ 29ರಂದು ಮನೆಯೊಂದರಲ್ಲಿ ಏಕಾಂಗಿಯಾಗಿ ಇಬ್ಬರು ಕುಳಿತಾಗ ಕರಿಷ್ಮಾ ತಂದೆ ಶಂಕರ್ ಮನೆಗೆ ಹೊರಗಿನಿಂದ ಬೀಗ ಹಾಕಿ ಗ್ರಾಮದ ಹಿರಿಯರನ್ನ ಕರೆಸಿ ಪಂಚಾಯತಿ ಮಾಡಿದ್ದರು. ಆಗ ಬುದ್ಧಿ ಹೇಳಿ ಹಿರಿಯರು ಬೀಗ ತೆರಸಿ ಕಳಿಸಿದ್ದಾರೆ. ಆದರೆ ಶಂಕರ್ ಸಂಜೆ ಇದೆ ಸಿಟ್ಟಿನಲ್ಲಿ ಕರಿಷ್ಮಾಳನ್ನ ಮನೆಯ ಮರ್ಯಾದೆ ಕಳೆಯುತ್ತಿದ್ದಿಯಾ ಎಂದು ಮನೆಯ ಹೊರಗಡೆ ಕರೆತಂದು ಮಾರಕಾಸ್ತ್ರಗಳಿಂದ ಇರಿದಿದ್ದಾನೆ.
ಮಾರಕಾಸ್ತ್ರಗಳಿಂದ ಇರಿದ ಮೇಲೆ ಕರಿಷ್ಮಾ ಸತ್ತಿರಬೇಕೆಂದು ಅಲ್ಲಿಂದ ಶಂಕರ್ ಕಾಲ್ಕಿತ್ತಿದ್ದಾನೆ. ತದನಂತರ ಅರುಣ್ ತನ್ನ ತಂದೆ ತಾಯಿಗೆ ಕರೆ ಮಾಡಿ ಕರೆಸಿ ಕೂಡಲೇ ಕರೀಷ್ಮಾಳನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಲಿಸಿದ್ದಾರೆ. ಸದ್ಯ ಪ್ರಕರಣವನ್ನು ದಾಖಲಿಸಿಕೊಂಡಿರುವ ಹೊರ್ತಿ ಪೊಲೀಸರು ಆರೋಪಿ ಶಂಕರ್ ನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ ಎಂದು ಎಸ್‍ಪಿ ಪಬ್ಲಿಕ್ ಟಿವಿಗೆ ಸ್ಪಷ್ಟ ಪಡಿಸಿದ್ದಾರೆ.