ರಾಯಚೂರು: ಸೇತುವೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ತಂದೆ-ಮಗ ಸಾವನ್ನಪ್ಪಿದ್ದು, ಮತ್ತಿಬ್ಬರಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ರಾಯಚೂರಿನ ಸಿಂಧನೂರು ಹೊರವಲಯದ ರಾಘವೇಂದ್ರ ರೈಸ್ ಮಿಲ್ ಬಳಿ ನಡೆದಿದೆ.
ಹನೀಫ್ ಕುರೇಸಿ (60) ಮತ್ತು ಅಬ್ದುಲ್ಲ (16) ಮೃತ ದುರ್ದೈವಿಗಳು. ಮೃತರು ರಾಯಚೂರಿನ ಮಂಗಳವಾರ ಪೇಡೆ ನಗರದ ನಿವಾಸಿಗಳಾಗಿದ್ದು, ಅಪಘಾತದಲ್ಲಿ ಅಖ್ತರಾ ಬಾನು ಮತ್ತು ಕಾರು ಚಾಲಕ ಅಬ್ದುಲ್ ಲತೀಫಗೆ ಗಾಯಗಳಾಗಿದೆ. ಅವರನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಹನೀಫ್ ಕುರೇಸಿ, ಅಬ್ದುಲ್ಲ ಮತ್ತು ಅಖ್ತರಾ ಬಾನು ಕುಟುಂಬದವರು ಹೊಸ ಕಾರ್ ಖರೀದಿಸಿದ್ದರು. ಇವರ ಹಿರಿಯ ಪುತ್ರ ದಾವಣಗೆರೆಯಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದನು. ಆದ್ದರಿಂದ ಮಗನಿಗೆ ಹೊಸ ಕಾರ್ ಗಿಫ್ಟ್ ಕೊಟ್ಟು ಸರ್ಪ್ರೈಸ್ ಕೊಡಬೇಕೆಂದು ದಾವಣಗೆರೆಗೆ ಹೋಗುತ್ತಿದ್ದರು. ಆದರೆ ಸಿಂಧನೂರಿನ ಮುಚ್ಚಳ ಕ್ಯಾಂಪ್ ಬಳಿಕ ಚಾಲಕನ ನಿಯಂತ್ರಣ ತಪ್ಪಿ ಕಾರ್ ಸೇತುವೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ ಮತ್ತು ಪುತ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಕುರಿತು ಸಿಂಧನೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ನಿರ್ಲಕ್ಷ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv