ರಾಯಚೂರು: ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಕಾಡಿದ ಬರಗಾಲದ ಪರಿಣಾಮ ಎಷ್ಟು ಘೋರವಾಗಿದೆ ಅಂದ್ರೆ ಈಗ ಮಳೆ ಬಂದರೂ ಹೊಲದಲ್ಲಿ ಬಿತ್ತನೆ ಮಾಡಲು ರೈತರಲ್ಲಿ ಹಣವಿಲ್ಲ. ಸಿಂಧನೂರು ತಾಲೂಕಿನ 4ನೇ ಮೈಲ್ ಕ್ಯಾಂಪ್‍ನಲ್ಲಿ ರೈತರು ಎತ್ತುಗಳ ಬಾಡಿಗೆ ಕೊಡಲು ಹಣವಿಲ್ಲದೆ ಸ್ವತಃ ತಾವೇ ಎತ್ತುಗಳಾಗಿ ನೋಗ ಹೊತ್ತು ಉಳುಮೆ ಮಾಡಿದ್ದಾರೆ.
ಮೂರು ಜನ ರೈತರು ಎರಡು ಎಕರೆ ಜಮೀನನ್ನ ಹರಗಿ, ಹತ್ತಿ ಕಾಳು ಬಿತ್ತನೆ ಮಾಡಿದ್ದಾರೆ. ಗ್ರಾಮದ ರಾಮಲಿಂಗಪ್ಪ, ಪ್ರದೀಪ್ ಹಾಗೂ ವಿರೇಶ್ ತಾವೇ ನೊಗ ಹೊತ್ತು ಜಮೀನನ್ನ ಉಳುಮೆ ಮಾಡಿದ್ದಾರೆ.
ಸತ್ಯನಾರಾಯಣ ಸ್ವಾಮಿ ಎಂಬವರ ಜಮೀನನ್ನ ಗುತ್ತಿಗೆ ಪಡೆದಿದ್ದ ಇವರು ಎತ್ತುಗಳಿಂದ ಉಳುಮೆ ಮಾಡಿದ್ರೆ ಒಂದು ದಿನಕ್ಕೆ ಒಂದು ಸಾವಿರ ರೂಪಾಯಿ ಬಾಡಿಗೆ ಕೊಡಬೇಕಾಗುತ್ತದೆ ಅಂತ ಎರಡು ದಿನ ಕಾಲ ತಾವೇ ನೊಗ ಹೊತ್ತು ಉಳುಮೆ ಮಾಡಿದ್ದಾರೆ.
ಕಳೆದ ವರ್ಷ ಜೋಡಿ ಎತ್ತುಗಳನ್ನ ಹೊಂದಿದ್ದ ಪ್ರದೀಪ್ ಬರಗಾಲ ಹೊಡೆತಕ್ಕೆ ಸಾಲ ತೀರಿಸಲು ಎತ್ತು ಮಾರಿದ್ದರು. ಈಗ ಸ್ವತಃ ತಾವೇ ಎತ್ತುಗಳಾಗಿ ದುಡಿಯುತ್ತಿರುವುದು ರೈತನ ನಿಕೃಷ್ಠ ಬದುಕಿಗೆ ಹಿಡಿದ ಕೈಗನ್ನಡಿಯಂತಿದೆ.