ಬೆಂಗಳೂರು: ಕಬ್ಬಿಗೆ (Sugarcane) ಬೆಂಬಲ ಬೆಲೆ ನಿಗದಿ ಮಾಡುವಂತೆ ರೈತರು (Farmers) ಕಹಳೆ ಮೊಳಗಿಸಿದ್ದಾರೆ. ಸರ್ಕಾರದ ವಿರುದ್ಧ ಕಬ್ಬು ಬೆಳೆಗಾರರ ಆಕ್ರೋಶದ ಕಟ್ಟೆಯೊಡೆದಿದ್ದು ಅಹೋರಾತ್ರಿ ಪ್ರತಿಭಟನೆ (Protest) 8ನೇ ದಿನಕ್ಕೆ ಕಾಲಿಟ್ಟಿದೆ.
ಸಿಎಂ ಸಿದ್ದರಾಮಯ್ಯ ಸೂಚನೆ ಮೇರೆಗೆ ಬೆಳಗಾವಿಗೆ ತೆರಳಿದ ಸಕ್ಕರೆ ಸಚಿವ ಶಿವಾನಂದ ಪಾಟೀಲ್ (Shivanand Patil), ರೈತರ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಶಿವಾನಂದಪಾಟೀಲ್ ವಿರುದ್ಧ ಸಿಡಿದೆದ್ದ ರೈತರು, ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿವಾನಂದ ಪಾಟೀಲ್ ಕಾರಿನ ಮೇಲೂ ಚಪ್ಪಲಿ, ವಾಟರ್ ಬಾಟಲ್ ತೂರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಮಸ್ಯೆ ಇತ್ಯರ್ಥಕ್ಕೆ ಎರಡು ದಿನಗಳ ಕಾಲಾವಕಾಶ ನೀಡುವಂತೆ ಶಿವಾನಂದಪಾಟೀಲ್ ಕೋರಿದ್ದಾರೆ. ಇದನ್ನೂ ಓದಿ: ಉಡುಪಿಯಲ್ಲಿ ಭಗವದ್ಗೀತೆ ಶ್ಲೋಕ ಪಠಿಸಲಿರುವ ಪ್ರಧಾನಿ ಮೋದಿ
ಬೆಳಗಾವಿಯ (Belagavi) ಮೂಡಲಗಿ ಪಟ್ಟಣದಲ್ಲಿ ಪ್ರಮುಖ ರಸ್ತೆ ಬಂದ್ ಮಾಡಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ಹೊರಹಾಕಿದರು. ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅಣಕು ಶವಯಾತ್ರೆ ನಡೆಸಲಾಯಿತು. ಜೊತೆಗೆ ಮೂಡಲಗಿ ಪಟ್ಟಣದಲ್ಲಿ ಅಂಗಡಿಗಳನ್ನು ಬಂದ್ ಮಾಡುವ ಮೂಲಕ ಸಾರ್ವಜನಿಕರು, ವ್ಯಾಪಾರಿಗಳು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದ್ರು.
ಅಥಣಿ ಪಟ್ಟಣದಲ್ಲೂ ರೈತರು ಬಾರುಕೋಲು ಬೀಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು. ವಿಜಯಪುರದಲ್ಲಿ ಕಬ್ಬು ಬೆಳೆಗಾರರ ಹೋರಾಟ ಮೂರನೇ ದಿನಕ್ಕೆ ಕಾಲಿಟ್ಟಿದ್ದು ಕಬ್ಬಿಗೆ 3,500 ರೂ ದರ ನಿಗದಿ ಆಗಬೇಕು ಅಂತ ಆಗ್ರಹಿಸಿದರು.
ಬಾಗಲಕೋಟೆಯ (Bagalkote) ಲೋಕಾಪುರದಲ್ಲಿ ಬೆಳಗಾವಿ-ರಾಯಚೂರ, ವಿಜಯಪುರ-ಧಾರವಾಡ ಹೆದ್ದಾರಿ ಬಂದ್ ಮಾಡಿ ಲೋಕಾಪುರದ ಬಸವೇಶ್ವರ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಕಬ್ಬಿಗೆ ಸೂಕ್ತ ಬೆಲೆಗಾಗಿ ಕಲಬುರಗಿಯಲ್ಲೂ (Kalaburagi) ರೈತರು ಸಿಡಿದೆದ್ದಿದ್ದಾರೆ. ಟನ್ ಕಬ್ಬಿಗೆ 3,500 ರೂ. ಬೆಲೆ ನಿಗದಿಗೆ ಆಗ್ರಹಿಸಿ ಅಫಜಲಪುರದಲ್ಲಿ ರೈತರು ಆಗ್ರಹಿಸಿದರು. ಅಫಜಲಪುರ- ಕಲಬುರಗಿ- ವಿಜಯಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಾರಿಗೆ ಬಸ್, ವಾಹನಗಳು ತಡೆದು ನೂರಾರು ರೈತರು ಪ್ರತಿಭಟನೆ ನಡೆಸಿದ್ರು.

