ಬೆಂಗಳೂರು: ರೈತರಿಗೆ ಮೋದಿ ಕೊಡುಗೆ ಶೂನ್ಯ ಎಂದು ಹೇಳಿಕೊಂಡು ರೈತರು ತಲೆ ಬೋಳಿಸಿಕೊಂಡು ವಿನೂತನವಾಗಿ ಪ್ರತಿಭಟನೆ ನಡೆಸಿದ್ದಾರೆ.
ರತ್ನ ಭಾರತ ರೈತ ಸಮಾಜ ಸಂಘಟನೆಯ ರಾಜ್ಯಾಧ್ಯಕ್ಷ ಲಕ್ಷ್ಮಣ ನೇತೃತ್ವದಲ್ಲಿ ಬೆಂಗಳೂರು ಹೊರವಲಯ ಕೆ.ಆರ್.ಪುರ ಬಸ್ ನಿಲ್ದಾಣದಲ್ಲಿ ಮೋದಿ ಕರ್ನಾಟಕ ಭೇಟಿ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ ರೈತರಿಗೆ ಮೋದಿ ಅವರ ಕೊಡುಗೆ ಶೂನ್ಯ ಎಂದು ಹೇಳಿಕೊಂಡು ರೈತರು ತಲೆ ಬೋಳಿಸಿಕೊಳ್ಳುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆ ಮಾತನಾಡಿದ ಲಕ್ಷ್ಮಣ್, ಮೋದಿ ಇದುವರೆಗೂ ರೈತರಿಗೆ ನೀಡಿದ ಕೊಡುಗೆ ಶೂನ್ಯ. ಅವರು ರೈತರಿಗೆ ಯೋಜನೆಗಳನಷ್ಟೇ ಸೃಷ್ಟಿಸುತ್ತಿದ್ದು, ಯೋಜನೆಗಳು ರೈತರಿಗೆ ತಲುಪಿಸುವ ಕೆಲಸ ಮಾಡುತ್ತಿಲ್ಲ. ಮಹದಾಯಿ ವಿಚಾರದಲ್ಲಿ ಮೋದಿ ಕರ್ನಾಟಕದ ರೈತರನ್ನು ನಿರ್ಲಕ್ಷಿಸಿದ್ದಾರೆ. ಜೊತೆಗೆ ಪ್ರವಾಹದ ವೇಳೆ ರೈತರ ಸಂಕಷ್ಟ ಅಲಿಸಲಿಲ್ಲ. ರೈತರ ಆತ್ಮಹತ್ಯೆ ತಡೆಯುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿದರು.
ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡುತ್ತೇವೆ ಅಂತ ಹೇಳಿತ್ತು. ಆದರೆ ಇದುವರೆಗೂ ರೈತರ ಸಾಲ ಮನ್ನಾ ಮಾಡಿಲ್ಲ. ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.