ನವದೆಹಲಿ: ಕೇಂದ್ರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿ ದೆಹಲಿಯ ಗಡಿ ಭಾಗಗಳಲ್ಲಿ ಕಳೆದ ಒಂದು ವರ್ಷದಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಸುಳಿವನ್ನು ರೈತ ನಾಯಕರು ನೀಡಿದ್ದಾರೆ. ಈ ವಿಚಾರವನ್ನು ನಾಳೆ ಸ್ಪಷ್ಟಪಡಿಸುವುದಾಗಿ ತಿಳಿಸಿದ್ದಾರೆ.
ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವ ಕುರಿತು ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಅವರು, ನಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದೆ. ಹೀಗಾಗಿ ನಾವು ಪ್ರತಿಭಟನೆ ಹಿಂತೆಗೆದುಕೊಳ್ಳಲು ಮುಂದಾಗಿದ್ದೇವೆ. ಆದರೆ ಸರ್ಕಾರದ ಪ್ರಸ್ತಾವನೆಯು ಸ್ಪಷ್ಟವಾಗಿಲ್ಲ. ನಾಳೆ ಮಧ್ಯಾಹ್ನ 2 ಗಂಟೆಗೆ ಸಭೆ ನಡೆಸಲಿದ್ದು, ಪ್ರತಿಭಟನೆ ನಿಲ್ಲಿಸುವ ಬಗ್ಗೆ ಸಭೆಯಲ್ಲಿ ಸ್ಪಷ್ಟ ನಿಲುವಿಗೆ ಬರಲಾಗುವುದು. ಅಲ್ಲಿಯವರೆಗೂ ನಮ್ಮ ಪ್ರತಿಭಟನೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಕೆಂಪು ಟೋಪಿ ಧರಿಸಿದವರು ಉತ್ತರಪ್ರದೇಶಕ್ಕೆ ಅಪಾಯಕಾರಿ: ಮೋದಿ
ಹಿಂದಿನಿಂದಲೂ ಸರ್ಕಾರ ಇದನ್ನೇ ಹೇಳಿಕೊಂಡು ಬರುತ್ತಿದೆ. ಆದ್ದರಿಂದ ಪ್ರತಿಭಟನೆ ಹಿಂತೆಗೆದುಕೊಳ್ಳುವ ವಿಚಾರವನ್ನು ನಾಳಿನ ಸಭೆಯಲ್ಲಿ ನಿರ್ಧರಿಲಾಗುವುದು ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ತಿಳಿಸಿದೆ. ಎಲ್ಲಾ ಬೇಡಿಕೆ ಈಡೇರುವವರೆಗೂ ರೈತರ‍್ಯಾರೂ ಮನೆಗೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.
ಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಪಂಜಾಬ್ ಸರ್ಕಾರ ಘೋಷಿಸಿದೆ. ಈವರೆಗೆ ಮೃತಪಟ್ಟಿರುವ 700 ರೈತರ ಕುಟುಂಬಕ್ಕೆ ಕೇಂದ್ರ ಸರ್ಕಾರವೂ ಪರಿಹಾರ ಘೋಷಿಸಬೇಕು ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ಗುರ್ನಾಮ್ ಸಿಂಗ್ ಛಾರುಣಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ವಿಧಾನ ಪರಿಷತ್ ಚುನಾವಣೆಯಲ್ಲಿ ದಿನೇಶ್ ಗೂಳಿಗೌಡ ಗೆಲುವು ಶತಸಿದ್ಧ: ಸಿದ್ದರಾಮಯ್ಯ
ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಕಳೆದ ಒಂದು ವರ್ಷದಿಂದ ದೆಹಲಿಯ ಗಡಿ ಭಾಗಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ ವೇಳೆ ಅನೇಕ ರೈತರು ಸಾವನ್ನಪ್ಪಿದ್ದಾರೆ. ರೈತರ ಪ್ರತಿಭಟನೆಗೆ ಮಣಿದಿರುವ ಕೇಂದ್ರ ಸರ್ಕಾರ ಅಧಿವೇಶನದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವ ಮಸೂದೆಯನ್ನು ಅಂಗೀಕರಿಸಿತು. ಆದಾಗ್ಯೂ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಪರಿಹಾರ ನೀಡಬೇಕು ಜೊತೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಡ್ಡಾಯಗೊಳಿಸುವ ಕಾನೂನು ಜಾರಿ ಮಾಡಿವಂತೆ ರೈತರು ಆಗ್ರಹಿಸಿದ್ದಾರೆ. ಈ ಪ್ರಮುಖ ಅಂಶಗಳು ಸೇರಿದ ಅನೇಕ ಬೇಡಿಕೆಗಳನ್ನು ಈಡೇರಿಸುವವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತರು ಪಟ್ಟುಹಿಡಿದಿದ್ದಾರೆ.