ಹಾವೇರಿ: ತಾವು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ಕಳ್ಳರಿಂದ ರಕ್ಷಿಸಿಕೊಳ್ಳಲು ರೈತರು ದೊಣ್ಣೆ ಹಿಡಿದುಕೊಂಡು ಕುಳಿತ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರಿನಲ್ಲಿ ನಡೆದಿದೆ.
ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ರೈತರು ತಾವು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿಯನ್ನು ರಕ್ಷಿಸಿಕೊಳ್ಳಲು ದೊಣ್ಣೆ ಹಿಡಿದುಕೊಂಡು ಕುಳಿತಿದ್ದಾರೆ. ತಾಲೂಕಿನ ನೂರಾರು ಹೆಕ್ಟರ್ ಪ್ರದೇಶದಲ್ಲಿ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ. ನಿರಂತರ ಮಳೆ, ಅಕಾಲಿಕ ಮಳೆ ಅದು ಇದು ಎಂದು ಎಲ್ಲ ಸಮಸ್ಯೆಗಳ ನಡುವೆಯೂ ರೈತರು ಬೆಳ್ಳುಳ್ಳಿ ಬೆಳೆದಿದ್ದಾರೆ.
Advertisement
Advertisement
ಬೆಳ್ಳುಳ್ಳಿಗೆ ಈಗ ಮಾರುಕಟ್ಟೆಯಲ್ಲಿ ಬಂಪರ್ ಬೆಲೆ ಇದೆ. ಪ್ರತಿ ಕ್ವಿಂಟಾಲ್ ಬೆಳ್ಳುಳ್ಳಿ ಕನಿಷ್ಟ 10 ಸಾವಿರದಿಂದ ಗರಿಷ್ಠ 18 ಸಾವಿರದವರೆಗೆ ಮಾರಾಟ ಆಗುತ್ತಿದೆ. ಹೀಗಾಗಿ ಬೆಳ್ಳುಳ್ಳಿ ಮೇಲೆ ಖದೀಮರ ಕಣ್ಣು ಬಿದ್ದಿದೆ. ರಾತ್ರೋರಾತ್ರಿ ರೈತರ ಜಮೀನುಗಳಿಗೆ ಎಂಟ್ರಿ ಕೊಟ್ಟು ಖದೀಮರು ಬೆಳ್ಳುಳ್ಳಿ ಕದ್ದುಕೊಂಡು ಹೋಗುತ್ತಿದ್ದಾರೆ. ಇದರಿಂದಾಗಿ ರೈತರು ಈಗ ಬೆಳ್ಳುಳ್ಳಿ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ.
Advertisement
Advertisement
ಈಗಾಗಲೇ ತಾಲೂಕಿನ ಕೂನಬೇವು, ಎರೆಕುಪ್ಪಿ ಸೇರಿದಂತೆ ಕೆಲವು ಕಡೆಗಳಲ್ಲಿ ರೈತರ ಜಮೀನಿನಲ್ಲಿ ರಾಶಿ ಮಾಡಲು ಹಾಕಿದ್ದ ಬೆಳ್ಳುಳ್ಳಿಯನ್ನು ಖದೀಮರು ಕದ್ದುಕೊಂಡು ಹೋಗಿದ್ದಾರೆ. ಬೆಳ್ಳುಳ್ಳಿ ಕಳುವಾದ ರೈತರು ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ದಾಖಲಿಸಿದ್ದಾರೆ. ಆದರೆ ಕೆಲವು ರೈತರು ಪೊಲೀಸ್ ಠಾಣೆಗೆ ಅಲೆದಾಡೋದು ಬೇಡಪ್ಪಾ ಎಂದು ದೂರು ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಒಂದೆರಡು ಬೆಳ್ಳುಳ್ಳಿ ಕಳ್ಳತನ ಪ್ರಕರಣಗಳು ನಡೆಯುತ್ತಿದ್ದಂತೆಯೇ ರೈತರು ಸಹ ಫುಲ್ ಅಲರ್ಟ್ ಆಗಿದ್ದಾರೆ.
ರಾಶಿ ಮಾಡಲು ಹಾಕಿರುವ ಬೆಳ್ಳುಳ್ಳಿ ಬಣವೆಗಳ ಬಳಿ ಗುಡಿಸಲು ಹಾಕಿಕೊಂಡು, ದೊಣ್ಣೆ ಹಿಡಿದುಕೊಂಡು ಕಾದು ಕುಳಿತಿದ್ದಾರೆ. ರೈತರ ಕುಟುಂಬದ ಸದಸ್ಯರು ಹಗಲು, ರಾತ್ರಿ, ಮಳೆ, ಚಳಿ ಎನ್ನದೇ ಕಳ್ಳರಿಗಾಗಿ ಕಾದು ಕುಳಿತಿದ್ದಾರೆ. ಐದಾರು ತಿಂಗಳು ಕಷ್ಟಪಟ್ಟು ಬೆಳೆದ ಬೆಳ್ಳುಳ್ಳಿ ಕಳ್ಳರ ಪಾಲಾಗದಂತೆ ಕಾಪಾಡಲು ರೈತರು ಟೆಂಟ್ ಹಾಕಿಕೊಂಡು ಬೆಳ್ಳುಳ್ಳಿ ಫಸಲು ಕಾಯುತ್ತಿದ್ದಾಎ. ಆದಷ್ಟು ಬೇಗ ರಾಶಿ ಮಾಡಿ ಮಾರಾಟ ಮಾಡಬೇಕು ಎಂದರೆ ಮಳೆರಾಯನೂ ರೈತರ ಬೆಳ್ಳುಳ್ಳಿ ಒಣಗಲು ಬಿಡುತ್ತಿಲ್ಲ. ಇದು ರೈತರಿಗೆ ದೊಡ್ಡ ತಲೆನೋವಾಗಿದ್ದು, ಬೆಳ್ಳುಳ್ಳಿ ಕಾಯುವುದೇ ರೈತರಿಗೆ ದೊಡ್ಡ ಸಾಹಸದ ಕೆಲಸವಾಗಿಬಿಟ್ಟಿದೆ.