ಮಂಡ್ಯ: ರಾಜ್ಯದಲ್ಲಿ ಭೀಕರ ಬರಗಾಲ ಒಂದು ಕಡೆಯಾದರೆ ಮತ್ತೊಂದು ಕಡೆ ಕಾವೇರಿ ಕೊಳ್ಳದ ರೈತರು ಕಾವೇರಿ ನೀರಿಗಾಗಿ (Cauvery Water) ಹೋರಾಟ ನಡೆಸುತ್ತಿದ್ದಾರೆ. ಆದರೆ ಕಾವೇರಿ ಕೊಳ್ಳದ ಶಾಸಕರೊಬ್ಬರು ಇವುಗಳ ನಡುವೆಯೂ ತಮ್ಮ ಕ್ಷೇತ್ರದ ಜನರನ್ನ ಮರೆತು ವಿದೇಶದ ಪ್ರವಾಸದಲ್ಲಿದ್ದಾರೆ. ಚುನಾವಣೆ ಮುಗಿದ ಬಳಿಕ ಐದು ತಿಂಗಳಲ್ಲಿ ಶಾಸಕರು ಕೈಕೊಂಡ ಮೂರನೇ ಪ್ರವಾಸ ಇದಾಗಿದೆ.
ಬರದ ನಡುವೆ ನಿಲ್ಲದ ಶಾಸಕನ ವಿದೇಶ ಪ್ರವಾಸಕ್ಕೆ (Foreign Tour) ಅನ್ನದಾತರು ಸಿಡಿದೆದ್ದಿದ್ದಾರೆ. ಗೆದ್ದ 5 ತಿಂಗಳಲ್ಲಿ ಮೂರನೇ ಬಾರಿ ವಿದೇಶಕ್ಕೆ ಹಾರಿದ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ನಡೆಗೆ ತೀವ್ರ ಖಂಡನೆ ವ್ಯಕ್ತವಾಗ್ತಿದೆ.. ಚುನಾವಣೆ ವೇಳೆ ಶಾಸಕರು ಅಮೆರಿಕಾದಲ್ಲಿನ ತನ್ನ ಕಂಪನಿ ಮಾರಿ ಹುಟ್ಟೂರಲ್ಲೇ ಇರುವುದಾಗಿ ಭರವಸೆ ನೀಡಿದ್ದರು. ಆದರೆ ಗೆದ್ದ ಕೆಲವೇ ದಿನಗಳಲ್ಲಿ ಅಮೆರಿಕಾಕ್ಕೆ ತೆರಳಿದ್ದ ದರ್ಶನ್ ಪುಟ್ಟಣ್ಣಯ್ಯ. ವಾಪಾಸ್ ಬಂದ ಬಳಿಕ ಕ್ಷೇತ್ರದ ಜನರ ಕ್ಷಮೆಯಾಚಿಸಿ ಮತ್ತೆ ವಿದೇಶಕ್ಕೆ ಹೋಗಲ್ಲ ಎಂದಿದ್ರು.
ಆದರೆ ಕಳೆದ ಆಗಸ್ಟ್ ನಲ್ಲೂ ವಿದೇಶಕ್ಕೆ ತೆರಳಿದ್ದ ಶಾಸಕರು ಸ್ವಾತಂತ್ರ್ಯ ದಿನಾಚರಣೆಗೂ ಗೈರಾಗಿದ್ದರು. ಶಾಸಕರ ಅನುಪಸ್ಥಿತಿಯಲ್ಲಿ ಸ್ವತಂತ್ರ ದಿನಾಚರಣೆ ಮಾಡಲಾಗಿತ್ತು. ಈಗ ಮತ್ತೆ ಕನ್ನಡ ರಾಜ್ಯೋತ್ಸವಕ್ಕೂ ಗೈರಾಗಿದ್ದಾರೆ. ಇದನ್ನೂ ಓದಿ: ಹೀಗೆ ಆದ್ರೆ ಮುಂದೆ ಕುಡಿಯೋಕು ಸಹ ನೀರು ಇರಲ್ಲ: ಕಾವೇರಿ ಹೋರಾಟದಲ್ಲಿ ಅಜ್ಜಿ ಕಣ್ಣೀರು
ಜಿಲ್ಲೆಯಲ್ಲಿ ಕಾವೇರಿ ಸಮಸ್ಯೆ, ಬರ, ಕರೆಂಟ್ ಹೀಗೆ ರೈತರು ಸಾಲು ಸಾಲು ಸಮಸ್ಯೆ ಎದುರಿಸುತ್ತಿದ್ರು ಶಾಸಕ ದರ್ಶನ್ ಪುಟ್ಟಣ್ಣಯ್ಯ ಡೋಂಟ್ ಕೇರ್ ಎಂದಂತಿದೆ. ಶಾಸಕ ದರ್ಶನ್ ನಡೆಗೆ ಆಕ್ರೋಶ ವ್ಯಕ್ತಪಡಿಸುತ್ತಿರುವ ಕ್ಷೇತ್ರದ ಜನರು. ಒಮ್ಮೆ ವಿದೇಶಕ್ಕೆ ಹೋದರೆ ತಿಂಗಳುಗಟ್ಟಲೆ ಕ್ಷೇತ್ರಕ್ಕೆ ಬರಲ್ಲ. ಇಲ್ಲೆ ಇದ್ದು ಜನರ ಸಮಸ್ಯೆ ಸ್ಪಂದಿಸಲು ಅವ್ರನ್ನ ಗೆಲ್ಲಿಸಿದ್ದೇವೆ. ಆದರೆ ವೈಯಕ್ತಿಕ ಕಾರಣಗಳನ್ನು ನೀಡಿ ಶಾಸಕರು ಪದೇ ಪದೇ ವಿದೇಶಕ್ಕೆ ಹೋಗ್ತಿದ್ದಾರೆ. ನಮ್ಮ ಸಮಸ್ಯೆಗಳನ್ನು ಯಾರಿಗೆ ಹೇಳೋದು ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ ಹೇಳುವುದಾದರೆ ರೈತರ ಪ್ರತಿನಿಧಿಯಾಗಿ ಚುನಾಯಿತ ಶಾಸಕರು ಕ್ಷೇತ್ರದ ಜನರ ಹಿತ ಕಾಯುವುದನ್ನು ಬಿಟ್ಟು ವಿದೇಶ ಪ್ರವಾಸ ಕೈಗೊಂಡಿರೋದು ಕ್ಷೇತ್ರದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಶಾಸಕರು ಕ್ಷೇತ್ರಕ್ಕೆ ವಾಪಸ್ ಬರ್ತಾರಾ..? ಅಥವಾ ಅಲ್ಲೇ ಇರ್ತಾರಾ ಕಾದು ನೋಡಬೇಕಿದೆ.
Web Stories