ಚಾಮರಾಜನಗರ: ಸೂರ್ಯಕಾಂತಿ ಹೂ ಅಂದ್ರೆ ಯಾರಿಗೆ ತಾನೇ ಇಷ್ಟವಾಗಲ್ಲ? ಆದರಲ್ಲೂ ಈ ಸೆಲ್ಫೀ ಯುಗದಲ್ಲಿ ಇಂತಹ ಆಕರ್ಷಣೆಯ ಹೂ ಕಂಡ್ರೆ ಮುಗಿದೇ ಹೋಯಿತು. ಯುವಕ ಯುವತಿಯರು ಹುಚ್ಚೆದ್ದು ಹೂವಿನ ಮುಂದೆ ಸೆಲ್ಫಿಗಳ ಸುರಿಮಳೆಯನ್ನೆ ಸುರಿಸಿ ಬಿಡುತ್ತಾರೆ. ಯುವ ಜನಾಂಗದ ಈ ಸೆಲ್ಫೀ ಕ್ರೇಜ್ ಬಳಸಿಕೊಂಡು ರೈತರೊಬ್ಬರು ಮಳೆ ಇಲ್ಲದಿದ್ದರೂ ಸಹ ಕೃಷಿಯಲ್ಲಿ ಸಾಕಷ್ಟು ಹಣ ಗಳಿಕೆ ಮಾಡ್ತಾ ಇದ್ದಾರೆ.
ಹೌದು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕುಮಾರ್ ಎಂಬ ರೈತ ಬೆಳೆದಿರುವ ಸೂರ್ಯಕಾಂತಿ ಬೆಳೆಯಿಂದ ದಿನನಿತ್ಯ 3 ರಿಂದ 4 ಸಾವಿರ ರೂ. ಹಣ ಸಂಪಾದನೆಯಾಗುತ್ತಿದೆ. ಅದು ಯುವ ಜನಾಂಗದ ಸೆಲ್ಫೀ ಕ್ರೇಜ್ ಬಳಕೆ ಮಾಡಿಕೊಂಡು. ದೃಶ್ಯದಲ್ಲಿ ಸೂರ್ಯಕಾಂತಿ ಹೂವಿನ ಜೊತೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳುತ್ತಾ ಇರುವ ಯುವಕರಿಗೆ ತಲಾ ಒಬ್ಬರಿಗೆ ಹತ್ತರಿಂದ ಇಪ್ಪತ್ತು ರೂಪಾಯಿ ಹಣವನ್ನು ನಿಗದಿ ಮಾಡಲಾಗಿದೆ.
Advertisement
Advertisement
ಈ ರಸ್ತೆಯಲ್ಲಿ ಅತಿಯಾಗಿ ಕೇರಳ ಭಾಗದವರು ಸಂಚರಿಸುವುದರಿಂದ ಅವರು ಸೂರ್ಯಕಾಂತಿಗೆ ಮಾರು ಹೋಗಿ ಪ್ರತಿನಿತ್ಯ ಯಾರೂ ಇಲ್ಲದ ವೇಳೆ ಫೋಟೋ ತೆಗೆದುಕೊಳ್ಳಲು ಬಂದು ಬೆಳೆಯನ್ನು ಮುರಿದು ಹಾಕುತ್ತಿದ್ದರು. ಹೀಗಾಗಿ ಕುಮಾರ್ ಇದನ್ನು ತಡೆಯಬೇಕು ಎಂದು ಇಲ್ಲಿ ಫೋಟೋ ತೆಗೆದುಕೊಳ್ಳುವವರು ಹಣ ನೀಡಬೇಕು ಎಂದು ಬೋರ್ಡ್ ಹಾಕಿದ್ದಾರೆ. ಹೀಗಿದ್ದರೂ ಸಹ ಫೋಟೋ ತೆಗೆದುಕೊಳ್ಳುವವರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ.
Advertisement
Advertisement
ಪ್ರತಿನಿತ್ಯ ನೂರಾರು ಮಂದಿ ಬಂದು ಹಣ ನೀಡಿ ಸೂರ್ಯಕಾಂತಿಯ ಮಧ್ಯೆ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಬೆಳೆಯ ಸಂರಕ್ಷಣೆ ಜೊತೆಗೆ ಆದಾಯವು ಕೂಡ ದೊರಕುತ್ತಿರುವುದು ಕುಮಾರ್ ಮುಖದಲ್ಲಿ ಮಂದಹಾಸ ಮೂಡಿದೆ.