ಧಾರವಾಡ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಕಿಸಾನ್ ಸಮ್ಮಾನ್ ಯೋಜನೆಯ ಹಣ ಬಿಡುಗಡೆಯಲ್ಲಿ ಎಡವಟ್ಟಾಗಿದ್ದು, ರೈತರು ಕಚೇರಿಗಳಿಗೆ ಅಲೆದಾಡುವಂತಾಗಿದೆ.
ಧಾರವಾಡ ತಾಲೂಕಿನ ಲಕಮಾಪುರ ಗ್ರಾಮದಲ್ಲಿ ಪ್ರಕರಣ ನಡೆದಿದ್ದು, ಗ್ರಾಮದ ರೈತ ಸಂಕಪ್ಪ ಹುಬ್ಬಳ್ಳಿ ಅವರ 3 ಎಕರೆ ಜಮೀನು ಮರೇವಾಡ ಗ್ರಾಮದಲ್ಲಿದೆ. 2019ರ ಜೂನ್‍ನಲ್ಲಿ ಇವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರೈತ ಸಂಪರ್ಕ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದರು. ಆದರೆ ಎರಡು ಕಂತುಗಳ ಹಣ ಸಂಕಪ್ಪ ಅವರ ಬ್ಯಾಂಕ್ ಖಾತೆಗೆ ಬೀಳುವ ಬದಲು, ಬೇರೆಯವರ ಖಾತೆಗೆ ಹೋಗಿದೆ.
ಈ ಕುರಿತು ಸಂಕಪ್ಪ ಅವರು ಸಿಂಡಿಕೇಟ್ ಬ್ಯಾಂಕ್‍ನಲ್ಲಿ ವಿಚಾರಣೆ ಮಾಡಿದ್ದಾರೆ. ಅಲ್ಲದೇ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನೂ ವಿಚಾರಿಸಿದ್ದಾರೆ. ಆದರೆ ಯಾರೂ ಈ ಕುರಿತು ಸೂಕ್ತ ಮಾಹಿತಿ ನೀಡಿಲ್ಲ. ಹೀಗಾಗಿ ಬಂದಿರುವ 2 ಕಂತಿನ 4 ಸಾವಿರ ರೂ.ಗಾಗಿ ಇಗಾಗಲೇ 4 ಸಾವಿರ ರೂ. ಸರ್ಕಾರಿ ಕಚೇರಿಗಳಿಗೆ ಅಲೆದು ಖರ್ಚು ಮಾಡಿದ್ದಾರೆ. ನಂತರ ಈ ಕುರಿತು ಪರಿಶೀಲಿಸಲಾಗಿದ್ದು, ಹಣ ನರೇಂದ್ರ ಗ್ರಾಮದ ರೈತರ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿದೆ ಎಂದು ತಿಳಿದಿದೆ.
ಈ ಕುರಿತು ಸಾಕಷ್ಟು ಬಾರಿ ಸರ್ಕಾರಿ ಕಚೇರಿಗಳಿಗೆ ಓಡಾಡಿದ್ದು, ಪ್ರಯೋಜನವಾಗಿಲ್ಲ. ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಮುಂದಾಗಿದ್ದಾರೆ. ಸದ್ಯ ಎರಡು ಕಂತಿನ ಹಣ ಬೇರೆ ಖಾತೆಗೆ ಹೋಗಿದೆ ಎಂಬುದು ತಿಳಿದಿದೆ. ಬರುವ ಮೂರು ಕಂತಿನ ಹಣವನ್ನಾದರೂ ನನ್ನ ಖಾತೆಗೆ ಬರುವ ಹಾಗೆ ಮಾಡಿ ಎಂದು ರೈತ ಎಲ್ಲ ಅಧಿಕಾರಿಗಳ ಬಳಿ ಗೋಗರೆಯುತ್ತಿದ್ದಾರೆ.