ಮಂಡ್ಯ: ವಿಷ ಸೇವಿಸಿ ಉಸ್ತುವಾರಿ ಸಚಿವರ ಬಳಿ ಬಂದ ರೈತ, ಸರ್ಕಾರದಿಂದ ವಶಪಡಿಸಿಕೊಂಡ ಜಮೀನಿಗೆ ಪರಿಹಾರ ಸಿಕ್ಕಿಲ್ಲ ಎಂದು ಸಚಿವರಿಗೆ ಮನವಿ ಪತ್ರ ಕೊಟ್ಟು ಕುಸಿದು ಬಿದ್ದ ಘಟನೆ ಮಂಡ್ಯದಲ್ಲಿ ನಡೆದಿದೆ.
ನಗರದ ಕಲಾಮಂದಿರಲ್ಲಿ ಜಿಲ್ಲಾಡಳಿತದಿಂದ ಬಸವ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಪ್ಪ ಸೇರಿದಂತೆ ಹಲವು ಜನ ಜನಪ್ರತಿನಿಧಿಗಳು, ಅಧಿಕಾರಿಗಳು ಪಾಲ್ಗೊಂಡಿದ್ರು.
ಈ ವೇಳೆ ಮೊದಲೇ ವಿಷ ಸೇವಿಸಿ ಬಂದಿದ್ದ ಮದ್ದೂರು ತಾಲೂಕಿನ ಅಂಕನಾಥಪುರ ಗ್ರಾಮದ ರೈತ ಅಪ್ಪಾಜಿ ಎಂಬುವವರು, ಕಲಾಮಂದಿರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆ ಮೇಲೆ ಕುಳಿತಿದ್ದ ಸಚಿವ ಕೃಷ್ಣಪ್ಪ ಅವರಿಗೆ ಮನವಿ ಪತ್ರ ಕೊಟ್ಟಿದ್ದಾರೆ. ಪತ್ರದಲ್ಲಿ ನಾಲೆ ನಿರ್ಮಾಣಕ್ಕೆ ಸರ್ಕಾರ ತಮ್ಮ ಜಮೀನು ವಶಪಡಿಸಿಕೊಂಡಿದೆ. ಆದ್ರೆ ಜಮೀನಿನ ಎರಡೂವರೆ ಲಕ್ಷ ಹಣ ಪರಿಹಾರ ನಮಗೆ ತಲುಪಿಲ್ಲ. ಇದ್ರಿಂದ ಸಾಲ ಹೆಚ್ಚಾಗಿ ಸಂಕಷ್ಟ ಅನುಭವಿಸುವಂತಾಗಿದ್ದು, ತಮ್ಮ ಸಮಸ್ಯೆ ಪರಿಹರಿಸಿ ಎಂದು ಕೇಳಿಕೊಂಡಿದ್ದಾರೆ.
ಮನವಿ ಪತ್ರ ನೀಡಿ ಕಲಾ ಕಲಾಮಂದಿರದಿಂದ ಹೊರ ಬಂದ ರೈತ ಮೊದಲೇ ವಿಷ ಸೇವಿಸಿದ್ದರಿಂದ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣ ರೈತ ಅಪ್ಪಾಜಿ ಬಳಿ ಬಂದ ಪೊಲೀಸರು ಪರಿಶೀಲಿಸಲಾಗಿ ವಿಷ ಸೇವಿಸಿರುವುದು ಪತ್ತೆಯಾಗಿದೆ. ಕೂಡಲೇ ರೈತನನ್ನು ಪೊಲೀಸರು ಆಟೋದಲ್ಲಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.