ಫರಿದಾಬಾದ್: ಆನ್‍ಲೈನ್‍ನಲ್ಲಿ 100ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪದ ಮೇಲೆ ಫರಿದಾಬಾದ್ ಪೊಲೀಸರು ಶುಕ್ರವಾರ ನಾಲ್ವರನ್ನು ಬಂಧಿಸಿದ್ದಾರೆ.
ವರದಿಯ ಪ್ರಕಾರ, ಆರೋಪಿಗಳ ಗ್ಯಾಂಗ್ ಲಾಟರಿ ಮತ್ತು ಕ್ರೆಡಿಟ್ ಕಾರ್ಡ್ ಆಕ್ಟಿವ್ ಮಾಡುವ ನೆಪದಲ್ಲಿ ಗ್ರಾಹಕರಿಗೆ ಬಹುಮಾನಗಳನ್ನು ನೀಡುತ್ತೇವೆ ಎಂದು ಆಸೆಯನ್ನು ಹುಟ್ಟಿಸುತ್ತಾರೆ. ಈ ಹಿನ್ನೆಲೆ ಗ್ರಾಹಕರು ಸಹ ಅವರು ಹೇಳಿದಕ್ಕೆ ಮರುಳಾಗಿ ಆರೋಪಿಗಳು ಕೇಳಿದ ಎಲ್ಲ ಮಾಹಿತಿಗಳನ್ನು ಕೊಡುತ್ತಾರೆ. ಅಲ್ಲದೆ ನಿಮಗೆ ಬಹುಮಾನ ಸಿಗಬೇಕಾದರೆ ಜಿಎಸ್‍ಟಿ ಹಣ ಕಟ್ಟಬೇಕು ಎಂದು ಕೇಳುತ್ತಾರೆ. ಅದರಂತೆ ಗ್ರಾಹಕರು ಸಹ ಹಣವನ್ನು ಕಟ್ಟುತ್ತಿದ್ದಂತೆ ತಮ್ಮ ಫೋನ್ ಸ್ವಿಚ್ ಆಫ್ ಮಾಡಿಕೊಂಡಿಕೊಳ್ಳುತ್ತಾರೆ ಎಂಬುದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಕಾಲಿನ ಮಂಡಿಯಲ್ಲಿ ಒಂದೂವರೆ ಕೆಜಿ ಚಿನ್ನ ಸಾಗಿಸುತ್ತಿದ್ದವ ಅರೆಸ್ಟ್!
ಬಂಧಿತ ಆರೋಪಿಗಳನ್ನು ಫರಿದಾಬಾದ್‍ನ ದೀಪಕ್ ಝಾ, ದೆಹಲಿಯ ದೀಕ್ಷಾ, ಉತ್ತರ ಪ್ರದೇಶದ ಸುಹೇಲ್ ಮತ್ತು ದೆಹಲಿಯ ದೀಪಕ್ ಸಿಂಗ್ ಎಂದು ನಗರ ಪೊಲೀಸರು ಗುರುತಿಸಿದ್ದಾರೆ.
ಮೋಸ ಹೋದ ಗ್ರಾಹಕರು ಪೊಲೀಸರಿಗೆ ದೂರು ನೀಡಿದ್ದು, ಅವರ ಜಾಲವನ್ನು ಪೊಲೀಸರು ಹುಡುಕಲು ಪ್ರಾರಂಭಿಸಿದ್ದಾರೆ. ತನಿಖೆ ವೇಳೆ ಪೊಲೀಸರಿಗೆ, ಆರೋಪಿಗಳು ತಮ್ಮನ್ನು ಬಚಾವ್ ಮಾಡಿಕೊಳ್ಳಲು ಸ್ಕಾರ್ಪಿಯೋ ಕಾರನ್ನು ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಈ ಗ್ಯಾಂಗ್ ಕಾರನ್ನು ‘ವರ್ಚುವಲ್ ಕಾಲ್ ಸೆಂಟರ್’ ಆಗಿ ಬಳಸುತ್ತಿದ್ದು, ಅದರ ನೋಂದಣಿ ಸಂಖ್ಯೆಯನ್ನು ಬದಲಾಯಿಸುತ್ತಲೇ ಇರುತ್ತಾರೆ ಎಂದು ತಿಳಿದುಕೊಂಡಿದ್ದಾರೆ.
ಪೊಲೀಸರು ಈ ಕುರಿತು ಮಾಹಿತಿ ನೀಡಿದ್ದು, ವಂಚನೆಗೆ ಸಂಬಂಧಿಸಿದಂತೆ ಸೆಕ್ಟರ್ 31 ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಜನರನ್ನು ವಂಚಿಸುವ ಸಲುವಾಗಿ, ಆರೋಪಿಗಳ ಗ್ಯಾಂಗ್ ಜನರಿಗೆ ಕರೆ ಮಾಡಿ ಅವರು ಸ್ಮಾರ್ಟ್ ವಾಚ್, ಕಾರು ಅಥವಾ ಮೋಟಾರ್‍ಸೈಕಲ್ ಗೆದ್ದಿದ್ದೇವೆ ಎಂದು ತಿಳಿಸುತ್ತಿದ್ದರು. 18% ಜಿಎಸ್‍ಟಿ ಪಾವತಿಸಿದ ನಂತರ ಬಹುಮಾನದ ಹಣವನ್ನು ಕ್ಲೈಮ್ ಮಾಡಬಹುದು ಎಂದು ಹೇಳುವ ಮೂಲಕ ಗ್ರಾಹಕರ ಬಳಿ ಹಣವನ್ನು ವಂಚಿಸುತ್ತಿದ್ರು ಎಂದು ವಿವರಿಸಿದರು. ಇದನ್ನೂ ಓದಿ: ಫೋನ್‌ನಲ್ಲಿ ಮಾತನಾಡುವಾಗ ಬಾಂಬ್ ಹಾಕುತ್ತಿದ್ದಾರೆ ಎಂದು ಬಂಕರ್‌ಗೆ ಓಡಿ ಹೋದ: ಪೋಷಕರ ಅಳಲು
ವಿಚಾರಣೆಯ ವೇಳೆ ಆರೋಪಿಗಳು ಹಲವಾರು ರಾಜ್ಯಗಳಲ್ಲಿ 100 ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. ದಾಳಿ ವೇಳೆ ಆರೋಪಿಗಳ ನಕಲಿ ಸಿಮ್ ಕಾರ್ಡ್, ಸಂಪರ್ಕಗಳ ಪಟ್ಟಿಯನ್ನು ಹೊಂದಿರುವ ಪೆನ್ ಡ್ರೈವ್ ಮತ್ತು ನಾಲ್ಕು ಸೆಲ್ ಫೋನ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.