ಬೆಂಗಳೂರು: ಉಪಚುನಾವಣೆ ಕಣ ರಂಗೇರಿದ್ದು, ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡರ ಪ್ರಚಾರದ ಅಬ್ಬರ ಜೋರಾಗಿದೆ. ಪ್ರಚಾರದ ವೇಳೆ ಮತದಾರರು ಶರತ್ ಅವರಿಗೆ ಸೇಬಿನ ಹಾರ ಮತ್ತು ತುಳಸಿ ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.
ಹೊಸಕೋಟೆ ತಾಲೂಕಿನ ಚಿಕ್ಕನಲ್ಲೂರಹಳ್ಳಿಯಲ್ಲಿ 30 ಅಡಿ ಎತ್ತರದ ತುಳಸಿ ಹಾರ ಹಾಕಿ ಶರತ್ ಅವರನ್ನು ಸ್ವಾಗತಿಸಿದರೆ, ಮಲೆಮಾಕಿನಪುರದಲ್ಲಿ ಬೃಹತ್ ಸೇಬಿನ ಹಾರ ಹಾಕಿ ಅಭಿಮಾನಿಗಳು, ಜನರು ಅಭಿಮಾನ ಮೆರೆದಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಾಜಕೀಯ ನಾಯಕರಿಗೆ ಬೃಹತ್ ಸೇಬಿನ ಹಾರಗಳನ್ನು ಹಾಕುವುದು ಟ್ರೆಂಡ್ ಆಗಿ ಹೋಗಿದ್ದು, ದೊಡ್ಡ ದೊಡ್ಡ ಪಕ್ಷಗಳಿಗೆ ಸೀಮಿತವಾಗಿದ್ದ ಬೃಹತ್ ಹಾರಗಳು ಇದೀಗ ಪಕ್ಷೇತರ ಅಭ್ಯರ್ಥಿಗಳಿಗೂ ಹಾಕಲಾಗುತ್ತಿದೆ. ವಿಶೇಷವಾಗಿ ಬೃಹತ್ ತುಳಸಿ ಹಾರ ಹಾಕಿ ಶರತ್ ಬಚ್ಚೇಗೌಡರನ್ನು ಸ್ವಾಗತಿಸಿದ್ದು ಎಲ್ಲರ ಗಮನ ಸೆಳೆದಿದೆ. ಇದನ್ನೂ ಓದಿ: ಮಾಜಿ ಸಿಎಂಗೆ 500 ಕೆಜಿ ತೂಕದ ಸೇಬು ಹಾರ ಹಾಕಿದ ಅಭಿಮಾನಿಗಳು
Advertisement
Advertisement
ಶರತ್ ಬಚ್ಚೇಗೌಡರು ತಾಲೂಕಿನಾದ್ಯಂತ ಬಿರುಸಿನ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಈ ನಡುವೆ ಬಿಜೆಪಿ ಅವರು ಮತದಾರರಿಗೆ ಕಮಲದ ಗುರುತು ಉಂಗುರ ಕೊಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿ, ನೀವೆಲ್ಲಾ ಉಂಗುರವನ್ನು ಹಾಕಿಕೊಳ್ಳುವಾಗ ಹುಷಾರಾಗಿ ಪರೀಕ್ಷೆ ಮಾಡಿ ತೆಗೆದುಕೊಳ್ಳಿ. ಅದು ತಾಮ್ರದ ಉಂಗುರ, ಏನಾದರೂ ಆಗಿದೇಯಾ ಅಂತ ಪರಿಶೀಲಿಸಿ. ಹಾಗೆಯೇ ಬೆರಳಿಗೆ ಹಾಕಿಕೊಂಡರೆ ಚರ್ಮರೋಗ ಬರುತ್ತದೆ ಎಂದು ಉಂಗುರ ಹಂಚಿದ್ದವರಿಗೆ ಟಾಂಗ್ ಕೊಟ್ಟಿದ್ದಾರೆ. ಸದ್ಯ ಶರತ್ ಬಚ್ಚೇಗೌಡರು ನಂದಗುಡಿ ಹೋಬಳಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸುತ್ತಿದ್ದು ಸಾವಿರಾರು ಕಾರ್ಯಕರ್ತರು ಅವರಿಗೆ ಬೆಂಬಲ ಸೂಚಿಸಿದ್ದಾರೆ.