ಬೆಂಗಳೂರು: ಜಲೀಲಲಾಗಿ ಸಿನಿಮಾರಂಗಕ್ಕೆ ಎಂಟ್ರಿಯಾದ ಎಚ್. ಅಮರನಾಥ್ ಆಮೇಲೆ ಅಂಬರೀಶನಾಗಿದ್ದು ಇತಿಹಾಸ. ತನ್ನ ತಾತ ಖ್ಯಾತ ಪಿಟೀಲು ವಾದಕರಾದ ಚೌಡಯ್ಯ ಅವರಾಗಿದ್ದರೂ ಎಂದೂ ಅದನ್ನ ಸಿನಿಮಾಗಾಗಿ ಬಳಸಿಕೊಂಡವರಲ್ಲ. 1972-73ರಲ್ಲಿ ತೆರೆಕಂಡ ಪುಟ್ಟಣ ಕಣಗಾಲ್ ಅವರ ‘ನಾಗರಹಾವು’ ಚಿತ್ರದಿಂದ ಹಿಡಿದು, ಮೊನ್ನೆ ಮೊನ್ನೆಯಷ್ಟೇ ತೆರೆಕಂಡ ‘ಅಂಬಿ ನಿಂಗೆ ವಯಸ್ಸಾಯ್ತೋ’ ಚಿತ್ರದವರೆಗೆ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿಮಾನಿಗಳನ್ನ ರಂಜಿಸಿದ್ದಾರೆ.
ಈ ಮೂಲಕ ತನ್ನದೇ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿದ್ದವರು ಅಂಬರೀಶ್. ಇವತ್ತು ಆ ಅಭಿಮಾನಿ ಸಾಗರ ಗೋಚರಿಸ್ತು. ವಿಕ್ರಂ ಆಸ್ಪತ್ರೆ, ಜಯನಗರದ ನಿವಾಸ, ಕಂಠೀರವ ಕ್ರೀಡಾಂಗಣದಲ್ಲಿ ಅಂಬರೀಶ್ ಅಂತಿಮ ದರ್ಶನಕ್ಕಾಗಿ ಅಬಾಲವೃದ್ಧರಾಗಿ ಅಭಿಮಾನಿಗಳು ಆಗಮಿಸಿದ್ದರು.
ಬೆಳಗ್ಗಿನ ಚಳಿಯನ್ನೂ ಲೆಕ್ಕಿಸದೆ ಸೂರ್ಯ ಹುಟ್ಟೋಕೆ ಮುನ್ನವೇ ಅಭಿಮಾನಿಗಳು, ರೆಬೆಲ್‍ಸ್ಟಾರ್ ಅವರನ್ನ ಕೊನೆಯ ಬಾರಿಗಾದರೂ ಕಣ್ತುಂಬಿಕೊಳ್ಳಬೇಕು ಅಂತ ಕಂಠೀರವ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದರು. ಕಣ್ಣೀರು ಸುರಿಸಿದ್ರು. ಆಕಂದ್ರನ ಮುಗಿಲು ಮುಟ್ಟಿತ್ತು. ಬಿಸಿಲೇರುತ್ತಿದ್ದಂತೆಯೇ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾಯ್ತು. ಮಧ್ಯಾಹ್ನದ ಹೊತ್ತಿಗೆ ಅದು ನೂರ್ಮಡಿ ಆಯ್ತು. 3 ಗಂಟೆ ಹೊತ್ತಿಗೆ ಅಂಬರೀಶ್ ಅವರನ್ನು ಮಂಡ್ಯದತ್ತ ಸಾಗಿಸಲು ಟೈಮ್ ಆಯ್ತು ಅಂತ ಹೇಳುತ್ತಿದ್ದಂತೆಯೇ ನೂಕು ನುಗ್ಗಲು ಜಾಸ್ತಿ ಆಯ್ತು. ನಮಗೊಮ್ಮೆ ಅವಕಾಶ ಕೊಡಿ ಅಂತ ಅಂಗಲಾಚಿದರು. ಕರ್ಣನ ದರ್ಶನ ಸಿಗದಿದ್ದಾಗ ಹತಾಶೆಯಿಂದ ಜೋರಾಗಿ ಘೋಷಣೆ ಕೂಗಿದರು.
ಕಬ್ಬಿಣದ ಸರಳುಗಳೇ ಬಿದ್ದೋಗುವಷ್ಟು ತಳ್ಳಾಟ ಇತ್ತು. ಪೊಲೀಸರಂತು ಅಕ್ಷರಶಃ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಅಭಿಮಾನಿ ಸಾಗರ ಅಂತ ಲಾಠಿ ಬೀಸಲು ಹೋಗಲಿಲ್ಲ. ಅಷ್ಟರ ಮಟ್ಟಿಗೆ ಎಲ್ಲವನ್ನು ಪೊಲೀಸರು ಸಹಿಸಿಕೊಂಡರು. ಎಚ್‍ಎಎಲ್ ಏರ್ ಪೋರ್ಟ್ ಗೆ ರವಾನಿಸುವಾಗ ಕಂಠೀರವ ಸ್ಟೇಡಿಯಿಂನಿಂದ ಎಚ್‍ಎಎಲ್ ಏರ್ ಪೋರ್ಟ್ ವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ನಿಂತು ಅಭಿಮಾನ ಮೆರೆಯಿತು.
https://www.youtube.com/watch?v=C-hQ4AFVKeo
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv