ಟಾಲಿವುಡ್ ನಲ್ಲಿ ಮತ್ತೆ ಡ್ರಗ್ಸ್ ಪ್ರಕರಣ ಆತಂಕ ಮೂಡಿಸಿದೆ. ಈಗಾಗಲೇ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಚಾರ್ಮಿ, ಪುರಿ ಜಗನ್ನಾಥ್, ಮುಮೈಥ್ ಖಾನ್ ಸೇರಿದಂತೆ ಹಲವರನ್ನು ಆರೋಪಿಗಳನ್ನಾಗಿಸಿದೆ. ಹಲವಾರು ಬಾರಿ ಇವರು ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಪ್ರಕರಣ ಮಾಸುವ ಮುನ್ನವೇ ಮತ್ತೆ ಟಾಲಿವುಡ್ ನಲ್ಲಿ ಡ್ರಗ್ಸ್ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಖ್ಯಾತ ನಟಿಯ ಪತಿಯನ್ನು ನಿನ್ನೆಯಷ್ಟೇ ಹೈದರಾಬಾದ್ ಮಾದಕ ವಸ್ತು ವಿರೋಧಿ ಪಡೆ ಬಂಧಿಸಿದೆ.
ಬಾಲಿವುಡ್ ಮತ್ತು ತೆಲುಗಿನಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿರುವ, ಖ್ಯಾತ ನಟಿ ನೇಹಾ ದೇಶಪಾಂಡೆ ಅವರ ಪತಿ ಮಿರೋನ್ ಮೋಹಿತ್ ಎನ್ನುವವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೇವಲ ನೇಹಾ ಪತಿಯನ್ನು ಮಾತ್ರವಲ್ಲ, ಖ್ಯಾತ ಉದ್ಯಮಿ ಕಿಶೋರ್ ರೆಡ್ಡಿ ಅನ್ನುವವರನ್ನು ಕೂಡ ಪೊಲೀಸರು ಬಂಧಿಸಿದ್ದು, ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ನೀಡಿದ ಮಾಹಿತಿಯ ಪ್ರಕರಣ ಮೂರು ಗ್ರಾಮ್ ನಷ್ಟು ಕೊಕೇನ್ ಅವರ ಬಳಿ ದೊರೆತಿದೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ನೇಹಾ ದೇಶಪಾಂಡೆ ಪತಿ ಮಿರೋನ್ ಹಲವಾರು ಡ್ರಗ್ಸ್ ದೊರೆಗಳ ಜೊತೆ ನಂಟು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಜಗತ್ತಿನ ಹೆಸರಾಂತ ಡ್ರಗ್ಸ್ ದೊರೆ ಪಾಬ್ಲೊ ಎಸ್ಕೋಬಾರ್ ನ ಅತೀ ಹೆಚ್ಚು ಪ್ರೀತಿಸುವ ವ್ಯಕ್ತಿಗಳಲ್ಲಿ ಮಿರೋನ್ ಕೂಡ ಒಬ್ಬರು ಎಂದು ಹೇಳಲಾಗುತ್ತಿದೆ. ಈ ಅಭಿಮಾನಕ್ಕಾಗಿಯೇ ಅವರು ತಮ್ಮ ನಾಯಿಗೆ ಪಾಬ್ಲೊ ಎಂದು ಹೆಸರಿಟ್ಟಿದ್ದಾರಂತೆ. ಅಲ್ಲದೇ, ಬೆಂಗಳೂರು, ಹೈದರಾಬಾದ್ ಸೇರಿದಂತೆ ಹಲವಾರು ಕಡೆ ಡಿಜೆ ನೈಟ್ ಪಾರ್ಟಿಗಳನ್ನೂ ಇವರು ಆಯೋಜನೆ ಮಾಡಿದ್ದಾರಂತೆ.
ಮಿರೋನ್ ಬಂಧನವಾಗುತ್ತಿದ್ದಂತೆಯೇ ಮತ್ತೆ ತೆಲುಗು ಸಿನಿಮಾ ರಂಗದಲ್ಲಿ ನಡುಕ ಶುರುವಾಗಿದೆ. ಮಿರೋನ್ ಯಾರೆಲ್ಲ ಹೆಸರು ಹೇಳುತ್ತಾನೆ ಎನ್ನುವ ಕುತೂಹಲವೂ ಮೂಡಿದೆ. ಈಗಾಗಲೇ ಸಿನಿಮಾ ರಂಗದ ಹಲವು ಸಿಲೆಬ್ರಿಟಿಗಳು ಡ್ರಗ್ಸ್ ಕೇಸಿನಲ್ಲಿ ಬಂಧನವಾಗಿದ್ದಾರೆ. ಅನೇಕರು ಆರೋಪಿ ಸ್ಥಾನದಲ್ಲೂ ಇದ್ದಾರೆ. ಇನ್ನೂ ಕೆಲವರು ವಿಚಾರಣೆಗೆ ಒಳಗಾಗಿದ್ದಾರೆ. ಈ ಹೊತ್ತಿನಲ್ಲಿ ಮಿರೋನ್ ಬಂಧನ, ಭಾರೀ ಆತಂಕವನ್ನಂತೂ ತಂದಿದೆ.