ಗೋರಖ್‍ಪುರ: ನಗರದ ಪ್ರಸಿದ್ಧ ವೈದ್ಯನೊಬ್ಬ ತನ್ನ ಮಾಜಿ ಪತ್ನಿಯನ್ನು ಕೊಂದು, ಆಕೆ ಬದುಕಿದ್ದಾಳೆ ಎಂದು ಬಿಂಬಿಸಲು ತಿಂಗಳುಗಟ್ಟಲೆ ಆಕೆಯ ಫೇಸ್‍ಬುಕ್ ಖಾತೆಯನ್ನು ಬಳಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಆರೋಪಿ ಧರ್ಮೇಂದ್ರ ಪ್ರತಾಪ್ ಸಿಂಗ್ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎನ್ನುವ ಕಾರಣಕ್ಕೆ ಕಳೆದ ಜೂನ್ ತಿಂಗಳಲ್ಲಿ ತನ್ನ ಮಾಜಿ ಪತ್ನಿ ರಾಖಿ ಅಲಿಯಾಸ್ ರಾಜೇಶ್ವರಿಯನ್ನು ನೇಪಾಳದ ಪ್ರೋಖ್ರಾ ಪರ್ವತದ ತುದಿಯಿಂದ ದೂಡಿ ಕೊಂದಿದ್ದ. ಬಳಿಕ ಅವಳು ಅಸ್ಸಾಂನಲ್ಲಿ ಇದ್ದಾಳೆ ಎಂದು ಬಿಂಬಿಸಲು ಆಕೆ ಬಳಸುತ್ತಿದ್ದ ಫೇಸ್‍ಬುಕ್ ಖಾತೆಯನ್ನು ಸಕ್ರಿಯವಾಗಿಟ್ಟಿದ್ದ.
Advertisement
Advertisement
ಕಳೆದ ಜೂನ್ ತಿಂಗಳಲ್ಲಿ ರಾಖಿ ತನ್ನ ಎರಡನೇ ಪತಿ ಮನೀಶ್ ಜೊತೆ ನೇಪಾಳಕ್ಕೆ ತೆರಳಿದ್ದಳು. ಆದರೆ ಅಲ್ಲಿಂದ ಮನೀಶ್ ಮಾತ್ರ ವಾಪಾಸ್ ಬಂದಿದ್ದ. ಬಳಿಕ ರಾಖಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದನು. ಆದರೆ ರಾಖಿಯ ಫೇಸ್‍ಬುಕ್ ಖಾತೆಯಲ್ಲಿ ಆಕೆ ಅಸ್ಸಾಂನಲ್ಲಿ ಇರುವ ಹಾಗೆ ಅಪ್‍ಡೇಟ್ ಇದ್ದಿದ್ದರಿಂದ ಅವಳು ಅಲ್ಲಿಯೇ ಇದ್ದಾಳೆ ಎಂದು ಕುಟುಂಬಸ್ಥರು ಭಾವಿಸಿದ್ದರು.
Advertisement
ನಾಪತ್ತೆ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಲೇ ಇದ್ದರು. ಈ ವೇಳೆ ರಾಖಿ ಎರಡನೇ ಪತಿ ಮನೀಶ್ ಸಿನ್ಹಾನನ್ನು ವಶಕ್ಕೆ ಪಡೆದು ನಿರಂತರ ವಿಚಾರಣೆ ನಡೆಸಿದಾಗ, ತಾನೋಬ್ಬನೆ ಊರಿಗೆ ವಾಪಸ್ ಬಂದೆ. ರಾಖಿ ನೇಪಾಳದಲ್ಲಿಯೇ ಉಳಿದುಕೊಂಡಳು ಎಂದು ಹೇಳಿದ್ದಾನೆ. ಬಳಿಕ ಈ ಕುರಿತು ದೀರ್ಘ ತನಿಖೆಗಳನ್ನು ನಡೆಸಿ ರಾಖಿಯ ಮೊಬೈಲ್ ಟ್ರಾಕ್ ಮಾಡಿದಾಗ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿದೆ.
Advertisement
ಹಣ ಹಾಗೂ ಆಸ್ತಿಗಾಗಿ ಬ್ಲಾಕ್‍ಮೇಲ್ ಮಾಡುತ್ತಿದ್ದಳು ಎಂಬ ಕಾರಣಕ್ಕೆ ಆಕೆಯ ಮೊದಲ ಪತಿಯೇ ತನ್ನ ಇಬ್ಬರು ಸ್ನೇಹಿತರೊಂದಿಗೆ ಸೇರಿ ಆಕೆಯನ್ನು ಕೊಂದಿರುವುದು ಬಯಲಾಗಿದೆ. ರಾಖಿ ಕುಡಿಯುತ್ತಿದ್ದ ಜ್ಯೂಸ್‍ಗೆ ಪ್ರಜ್ಞೆ ತಪ್ಪುವ ಮಾತ್ರೆ ಸೇರಿಸಿ ಬಳಿಕ ಆಕೆಯನ್ನು ಪರ್ವತದಿಂದ ದೂಡಿ ಕೊಲೆ ಮಾಡಿರುವ ಸತ್ಯಾಂಶ ಹೊರಬಿದ್ದಿದೆ.
ಅಷ್ಟೇ ಅಲ್ಲದೆ ರಾಖಿ ಸಾವನ್ನಪ್ಪಿರುವ ವಿಷಯ ಮುಚ್ಚಿಡಲು ಆಕೆಯ ಮೊಬೈಲ್ ಬಳಸಿಕೊಂಡು ನಿರಂತರವಾಗಿ ಅವಳ ಫೇಸ್‍ಬುಕ್ ಖಾತೆಯಿಂದ ಅಪ್‍ಡೇಟ್ ಮಾಡುತ್ತಿದ್ದ ವಿಷಯವನ್ನು ಕೂಡ ಆರೋಪಿ ಬಾಯಿಬಿಟ್ಟಿದ್ದಾನೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv