ಚಿಕ್ಕೋಡಿ/ಬೆಳಗಾವಿ: ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಫ್ಯಾಮಿಲಿ ವಾರ್ ಪ್ರಾರಂಭವಾಗಿದೆ. ಒಂದು ಕಡೆ ಅಪ್ಪ ಗೆಲ್ಲಬೇಕು ಅಂತ ಕಾಂಗ್ರೆಸ್ ಗಣೇಶ್ ಮತಯಾಚನೆ ಮಾಡುತ್ತಿದ್ದರೆ, ಇನ್ನೊಂದು ಕಡೆ ಪತಿ ಗೆಲ್ಲಬೇಕು ಎಂದು ಶಶಿಕಲಾ ಜೊಲ್ಲೆ ಪ್ರಚಾರ ಮಾಡುತ್ತಿದ್ದಾರೆ.
ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಮತ್ತು ಹಾಲಿ ಸಂಸದ ಪ್ರಕಾಶ್ ಹುಕ್ಕೇರಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ರಾಜ್ಯದಲ್ಲಿ ಚಿಕ್ಕೋಡಿ ಮತಕ್ಷೇತ್ರ ಗಮನ ಸೆಳೆಯುತ್ತಿದೆ. ಯಾಕೆಂದರೆ ಇಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಯ ಹಿಂದೆ ನಿಂತು ಮನೆಯಲ್ಲಿನ ಎಂಎಲ್‍ಎಗಳು ಪ್ರಚಾರ ಕಾರ್ಯ ಮಾಡುತ್ತಿದ್ದಾರೆ. ಸಂಸದ ಪ್ರಕಾಶ್ ಹುಕ್ಕೇರಿ ಪರವಾಗಿ ಮಗ ಗಣೇಶ್ ಹುಕ್ಕೇರಿ ಗ್ರಾಮ ಗ್ರಾಮಗಳನ್ನು ಸುತ್ತಿ ತಂದೆಯ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇತ್ತ ಬಿಜೆಪಿಯ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ ಪತ್ನಿ ಶಶಿಕಲಾ ಜೊಲ್ಲೆಯವರು ಕೂಡ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ.
ಈ ಬಗ್ಗೆ ಶಾಸಕಿ ಶಶಿಕಲಾ ಜೊಲ್ಲೆ ಅವರಿಗೆ ಕೇಳಿದರೆ, ನನಗೆ ಹೆಗಲಿಗೆ ಹೆಗಲು ಕೊಟ್ಟು ಬೆಳೆಸಿದ ಪತಿ ಅಣ್ಣಾಸಾಹೇಬ ಜೊಲ್ಲೆ ಅವರ ಪರವಾಗಿ ಪ್ರಚಾರ ನಡೆಸಿದ್ದೇನೆ. ನಾನು ಹೆಂಡತಿಯಾಗಿಯೂ ಮತ್ತು ಪಕ್ಷದ ಒಬ್ಬ ಶಾಸಕಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. ಅವರಿಗೆ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಇತ್ತ ನಮ್ಮ ತಂದೆಯ ಹೆಗಲಿಗೆ ಹೆಗಲು ಕೊಟ್ಟು ದುಡಿದು ಅವರನ್ನ ಆರಿಸಿ ಮತ್ತೆ ಪಾರ್ಲಿಮೆಂಟ್‍ಗೆ ಕಳುಹಿಸುತ್ತೀನಿ ಎಂದು ಗಣೇಶ್ ಹುಕ್ಕೇರಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನು ಕಳೆದ ಬಾರಿ ನಡೆದ ವಿಧಾನಸಭೆ ಚುಣಾವಣೆಯಲ್ಲಿಯೂ ಸಹ ಬೆಳಗಾವಿ ಜಿಲ್ಲೆಯ ಈ ಪ್ರತಿಷ್ಠಿತ ಎರಡು ಮನೆತನಗಳು ಎದುರಾಗಿದ್ದವು. ಆಗ ಶಾಸಕ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಎದುರಾಳಿಯಾಗಿ ಸ್ಪರ್ಧಿಸಿದ್ದರು. ಈಗ ಲೋಕಸಭೆ ಚುಣಾವಣೆಯಲ್ಲೂ ಸಹ ಅದೇ ರೀತಿಯ ವಾತಾವರಣ ಮುಂದುವರೆದಿದ್ದು, ಗಣೇಶ್ ಹುಕ್ಕೇರಿಯವರ ತಂದೆ ಸಂಸದ ಪ್ರಕಾಶ್ ಹುಕ್ಕೇರಿ ವಿರುದ್ಧ ಅಣ್ಣಾಸಾಹೇಬ ಜೊಲ್ಲೆ ಸೆಣಸಲು ರೆಡಿಯಾಗಿದ್ದಾರೆ.