ಚಿಕ್ಕೋಡಿ: ಮಹಾರಾಷ್ಟ್ರದ ಸೇರಿದಂತೆ ರಾಜ್ಯ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜನರು ಪ್ರವಾಹದಲ್ಲಿ ಸಿಲುಕಿ ಸಮಸ್ಯೆ ಎದುರಿಸುತ್ತಿದ್ದಾರೆ. ಕೃಷ್ಣಾ ನದಿ ಹಾಗೂ ಹಿರಣ್ಯಾಕೇಶಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ನದಿ ಪಾತ್ರದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಇದನ್ನೇ ದುರುಪಯೋಗಿಸಿಕೊಂಡಿರುವ ಕೆಲ ಖದೀಮರು ಡ್ಯಾಂ ಒಡೆದು ಹೋಗಿದೆ ಗ್ರಾಮವನ್ನ ಖಾಲಿ ಮಾಡಿ ಎಂದು ಹೇಳಿದ್ದಾರೆ.
ಹುಕ್ಕೇರಿ ತಾಲೂಕಿನ ಗೋಡಗೇರಿಯಲ್ಲಿ ಬುಧವಾರ ತಡರಾತ್ರಿ ಈ ರೀತಿಯ ಸುಳ್ಳು ಸುದ್ದಿಯೊಂದು ಹಬ್ಬಿದೆ. ಗ್ರಾಮದ ಬಳಿಯ ಚಿತ್ರಿ ಡ್ಯಾಂ ಒಡೆದಿದೆ ಎಂದು ಹೇಳಿ ಊರಿನಲ್ಲಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚಿಸಿದ್ದಾರೆ. ಇವರ ಮಾತನ್ನು ನಂಬಿರುವ ಗ್ರಾಮಸ್ಥರು ರಾತ್ರೋ ರಾತ್ರಿ ಊರು ಖಾಲಿ ತೆರಳಿದ್ದಾರೆ. ಈ ಸಂದರ್ಭದಲ್ಲಿ ಕೆಲ ಮನೆಗಳಲ್ಲಿ ಕಳ್ಳತನ ಆಗಿರುವ ಬಗ್ಗೆಯೂ ಮಾಹಿತಿ ಲಭಿಸಿದೆ.
ಘಟನೆಯ ಕುರಿತು ಗೋಡಗೇರಿಯ ಗ್ರಾಮಸ್ಥರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ್ದು, ನಮಗೆ ರಾತ್ರಿ ಕೆಲವರು ಈ ರೀತಿ ಸುಳ್ಳು ಸುದ್ದಿ ನೀಡಿದ್ದರು. ಪರಿಣಾಮ ಗ್ರಾಮದ ಹಲವರು ಬೇರೆಡೆ ತೆರಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಅಧಿಕಾರಿಗಳು ಸ್ಪಷ್ಟನೆ ನೀಡಿ, ಯಾವುದೇ ಡ್ಯಾಂ ಒಡೆದಿಲ್ಲ, ಆದರೆ ನೀರಿನ ಪ್ರಮಾಣ ಹೆಚ್ಚಳವಾಗಿದೆ. ಮಳೆಯ ಪ್ರಮಾಣ ಕೂಡ ಹೆಚ್ಚಾಗಿರುವುದರಿಂದ ಪ್ರವಾಹದ ಪ್ರಮಾಣ ಹೆಚ್ಚಾಗಿದೆ. ಆದರೆ ಈ ಭಾಗದ ಗ್ರಾಮಸ್ಥರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
ಕೇವಲ ಗೋಡಗೇರಿ ಗ್ರಾಮ ಮಾತ್ರವಲ್ಲದೇ ಹಿರಣ್ಯಕೇಶಿ ನದಿಯ ಸಮೀಪ ಇರುವ ಸುಮಾರು 6 ಗ್ರಾಮಗಳಲ್ಲಿ ಇಂತಹದ್ದೆ ಸುದ್ದಿ ಹಬ್ಬಿಸಲಾಗಿದೆ. ಜಿಲ್ಲಾಡಳಿತ ಇಂತಹ ಸುದ್ದಿಗಳ ಬಗ್ಗೆ ಸ್ಪಷ್ಟನೆ ನೀಡಿ ಗ್ರಾಮಸ್ಥರ ಆತಂಕವನ್ನು ದೂರ ಮಾಡಬೇಕಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಈಗಾಗಲೇ ಗ್ರಾಮ ಬಿಟ್ಟು ತೆರಳಿರುವ ಜನರು ಮತ್ತೆ ವಾಪಸಾಗುತ್ತಿದ್ದಾರೆ.