ರಾಮನಗರ/ಬೆಂಗಳೂರು: ಬೆಂಗಳೂರು (Bengaluru) ಹೊರವಲಯದಲ್ಲಿ ಪತ್ತೆಯಾಗಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ನಕಲಿ ಔಷಧಿ ಜಾಲದ ಪ್ರಮುಖ ಕಿಂಗ್‌ಪಿನ್ ಪ್ರಶಾಂತ್ ವಿದೇಶದಲ್ಲಿ ಸಿಕ್ಕಿಬಿದ್ದಿದ್ದಾನೆ. ಇಬ್ಬರು ಸ್ನೇಹಿತರ ಜೊತೆ ಅಜರ್‌ಬೈಜಾನ್‌ಗೆ ತೆರಳಿದ್ದ ಈತನ ಪಾಸ್‌ಪೋರ್ಟ್‌ನಲ್ಲಿ (Passport) ಲೋಪದೋಷ ಕಂಡುಬಂದಿದ್ದು, ಅಲ್ಲಿನ ಏರ್‌ಪೋರ್ಟ್ ಕಸ್ಟಮ್ಸ್ ಅಧಿಕಾರಿಗಳು (Customs Officers) ಪಾಸ್‌ಪೋರ್ಟ್ ಜಪ್ತಿ ಮಾಡಿದ್ದಾರೆ.
ಅಲ್ಲಿನ ಅಧಿಕಾರಿಗಳು ಪ್ರತಿದಿನ ಪ್ರಶಾಂತ್‌ನನ್ನು ವಿಚಾರಣೆಗೆ ಕರೆದು ಬಿಟ್ಟುಕಳುಹಿಸುತ್ತಿದ್ದಾರೆ. ತನ್ನ ಪತ್ನಿಯ ಜೊತೆ ಸಂಪರ್ಕದಲ್ಲಿರುವ ಪ್ರಶಾಂತ್, ಶೀಘ್ರದಲ್ಲೇ ಬೆಂಗಳೂರಿಗೆ ವಾಪಸ್ಸಾಗುವುದಾಗಿ ತಿಳಿಸಿದ್ದಾನೆ. ಈ ನಡುವೆ, ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (SIT) ಅಜರ್‌ಬೈಜಾನ್‌ನ ರಾಯಭಾರಿ ಕಚೇರಿಗೆ ಅಧಿಕೃತ ಪತ್ರ ಬರೆದಿದೆ. ಇದನ್ನೂ ಓದಿ :ನಕಲಿ ಮೆಡಿಸಿನ್ ಮಾಫಿಯಾ – ಆರೋಪಿಯಿಂದ ಔಷಧಿ ಖರೀದಿಸಿದ್ದ ಮೆಡಿಕಲ್ ಶಾಪ್ ಮಾಲೀಕರಿಗೆ SIT ನೋಟಿಸ್
ತಮ್ಮ ಪತ್ರದಲ್ಲಿ ಪ್ರಶಾಂತ್ ವಿರುದ್ಧ ಬೆಂಗಳೂರಿನಲ್ಲಿ ದಾಖಲಾಗಿರುವ ಎಫ್‌ಐಆರ್ ಹಾಗೂ ನಕಲಿ ಡ್ರಗ್ಸ್ ದಂಧೆಯ ಗಂಭೀರತೆಯ ಬಗ್ಗೆ ಉಲ್ಲೇಖಿಸಿರುವ ಎಸ್‌ಐಟಿ, ಆರೋಪಿಯನ್ನು ತಕ್ಷಣವೇ ಭಾರತಕ್ಕೆ ಹಸ್ತಾಂತರಿಸುವಂತೆ ಕೋರಿದೆ. ಇದರಿಂದ ನಕಲಿ ಔಷಧಿ ಜಾಲದ ಪ್ರಮುಖ ಸೂತ್ರಧಾರ ಶೀಘ್ರದಲ್ಲೇ ಪೊಲೀಸರ ಬಲೆಗೆ ಬೀಳುವ ಸಾಧ್ಯತೆಯಿದೆ.
