– ಎಂಟು ಆರೋಪಿಗಳ ಬಂಧನಕ್ಕೆ ಬಲೆ
ಚಿತ್ರದುರ್ಗ: ಭಾರತೀಯ ಸೇನೆ ಹಾಗೂ ವಿವಿಧ ಸರ್ಕಾರಿ ಉದ್ಯೋಗ ಪಡೆಯಲು ಯುವಕರು ವಾಮ ಮಾರ್ಗ ಅನುಸರಿಸುತ್ತಿದ್ದು, ನಕಲಿ ದಾಖಲೆ ಸೃಷ್ಟಿಸಿ ಸೇನೆಗೆ ಸೇರಲು ಯತ್ನಿಸಿದ್ದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಇಬ್ಬರು ಖತರ್ನಾಕ್ ಖದೀಮರನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Advertisement
ಮಹಾರಾಷ್ಟ್ರದ ರೇವನಾಳ್ ಗ್ರಾಮದ ಸಚಿನ್(23), ಬಸ್ಕರ್ ಗ್ರಾಮದ ಸಂತೋಷ್(23) ಬಂಧಿತ ಆರೋಪಿಗಳು, ಚಿತ್ರದುರ್ಗದ ನಿವಾಸಿಗಳೆಂಬಂತೆ ನಕಲಿ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಡಿತರ ಚೀಟಿಯನ್ನು ಸೃಷ್ಟಿಸಿಕೊಂಡಿದ್ದರು. ಚಿತ್ರದುರ್ಗದ ಉತ್ಸವಾಂಬ ದೇವಾಲಯದ ಹಿಂಭಾಗದಲ್ಲಿ ವಾಸವಾಗಿರುವ ಮಹಲಿಂಗಾಚಾರ್ ಎನ್ನುವವರ ಮನೆಯಲ್ಲಿ ವಾಸವಾಗಿರುವುದಾಗಿ ವಿಳಾಸ ನೀಡಿದ್ದರು. ಪೊಲೀಸರು ಈ ವಿಳಾಸಕ್ಕೆ ಹೋಗಿ ಪರಿಶೀಲಿಸಿದಾಗ ಆ ಹೆಸರಿನವರು ಯಾರು ಇರಲಿಲ್ಲ. ಅಲ್ಲದೆ ಸಚಿನ್ ಹಾಗೂ ಸಂತೋಷ್ ಕೂಡ ಚಿತ್ರದುರ್ಗದವರಲ್ಲ ಎಂದು ದೃಢವಾಗಿರುತ್ತದೆ.
Advertisement
ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದರು. ಇವರಿಗೆ ಇನ್ನೂ ಏಳು ಜನ ಮಹಾರಾಷ್ಟ್ರ ಮೂಲದವರು ಹಾಗೂ ಓರ್ವ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಆಸಾಮಿ ಸಾಥ್ ನೀಡಿದ್ದು, ನಕಲಿ ದಾಖಲೆ ಸೃಷ್ಟಿಸಿಕೊಡಲು ಲಕ್ಷಾಂತರ ರೂ. ಹಣವನ್ನು ಸಹ ನೀಡಿದ್ದಾರೆ ಎನ್ನಲಾಗಿದೆ. ಹೀಗಾಗಿ ತಲೆ ಮರೆಸಿಕೊಂಡಿರುವ ಇನ್ನುಳಿದ 8 ಜನ ಆರೋಪಿಗಳಿಗಾಗಿ ಚಿತ್ರದುರ್ಗ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
Advertisement
Advertisement
ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ಪಡೆಯುತ್ತಿರುವ ದೊಡ್ಡ ಜಾಲವೇ ಇವರ ಹಿಂದೆ ಇರಬಹುದು ಎಂದು ಚಿತ್ರದುರ್ಗ ಎಸ್ಪಿ ರಾಧಿಕಾ ಶಂಕಿಸಿದ್ದಾರೆ. ಎಸ್ಪಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ನಯೀಮ್, ಪೊಲೀಸರಾದ ದಿವಾಕರ್, ಪ್ರಕಾಶ್ ಅವರು ತಂಡ ರಚಿಸಿಕೊಂಡು ಈ ಖತರ್ನಾಕ್ ಜಾಲವನ್ನು ಪತ್ತೆ ಹಚ್ಚಲು ಬಲೆ ಬೀಸಿದ್ದಾರೆ.