ಹಾವೇರಿ: ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಪಡೆದು ಸಶಸ್ತ್ರ ಪೊಲೀಸ್ ಪೇದೆ (Police) ಹುದ್ದೆಗೆ ಆಯ್ಕೆಯಾಗಿದ್ದ ವ್ಯಕ್ತಿಯೊಬ್ಬನಿಗೆ ಇಲ್ಲಿನ (Haveri) ಒಂದನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) 7 ವರ್ಷ ಜೈಲು ಹಾಗೂ 30 ಸಾವಿರ ರೂ. ದಂಡ ವಿಧಿಸಿದೆ.
ಸೋಮಶೇಖರ್ ಭೀಮಪ್ಪ ಕುಂಕುಮಗಾರ ಎಂಬಾತ ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ. ಹಿರೇಕೆರೂರು ತಾಲೂಕಿನ ಭೋಗಾವಿ ಗ್ರಾಮದ ಈತ ಮೂಲತಃ ಕುಂಕುಮಗಾರ (ಬಲಿಜ ಜನಾಂಗ) ಜಾತಿಗೆ ಸೇರಿದ್ದರೂ ಸಹ, ಭೋಗಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಕಾರ್ಯನಿರ್ವಹಿಸುತ್ತಿದ್ದ ಮೃತ ಹನುಮಂತಪ್ಪ ತಳವಾರನ ಸಹಕಾರ ಪಡೆದು ಚನ್ನದಾಸರ ಎಂದು ಜಾತಿ ಕಾಲಂನಲ್ಲಿ ನಮೂದಿಸಿದ್ದ. ಬಳಿಕ ಸುಳ್ಳು ವ್ಯಾಸಂಗ ಪ್ರಮಾಣಪತ್ರ ಹಾಗೂ ಇತರೆ ದಾಖಲಾತಿಗಳನ್ನು ಸೃಷ್ಟಿಸಿ, ಹಿರೇಕೆರೂರು ತಹಸೀಲ್ದಾರರಿಗೆ ಸಲ್ಲಿಸಿ, ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿದ್ದ. ಇದನ್ನೂ ಓದಿ: ಸ್ಮೃತಿ ಇರಾನಿ ಭೇಟಿಯಾದ ಲಕ್ಷ್ಮಿ ಹೆಬ್ಬಾಳ್ಕರ್: ಕೇಂದ್ರ ಪುರಸ್ಕೃತ ಯೋಜನೆಗಳ ಅನುದಾನ ಬಿಡುಗಡೆಗೆ ಮನವಿ
Advertisement
Advertisement
ಈ ನಕಲಿ ದಾಖಲಾತಿಗಳಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಶಸ್ತ್ರ ಪೊಲೀಸ್ ಪೇದೆ ಹುದ್ದೆಗೆ ಆಯ್ಕೆಯಾಗಿದ್ದಾನೆಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅಧ್ಯಕ್ಷರ ನಡಾವಳಿಯಿಂದ ಮತ್ತು ತನಿಖೆಯಿಂದ ಆರೋಪ ದೃಢಪಟ್ಟಿದೆ. ಈ ಆಧಾರದ ಮೇಲೆ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದಾವಣಗೆರೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ತನಿಖಾಧಿಕಾರಿ ಪೊಲೀಸ್ ಆರಕ್ಷಕ ಉಪ ನಿರೀಕ್ಷಕರಾದ ಜಯರತ್ನಮ್ಮ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
Advertisement
Advertisement
ತಿದ್ದುಪಡಿ ಕಾಯ್ದೆ- 2015 ಅಡಿಯಲ್ಲಿ ಆಪಾದನೆಗಳು ರುಜುವಾತದ ಹಿನ್ನೆಲೆಯಲ್ಲಿ ನ್ಯಾ.ಜಿ.ಎಲ್.ಲಕ್ಷ್ಮೀನಾರಾಯಣ ಅವರಿದ್ದ ಪೀಠ ಅಪರಾಧಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.
ಸರ್ಕಾರದ ಪರವಾಗಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರ್ಕಾರಿ ಅಭಿಯೋಜಕರಾದ ಸರೋಜಾ ಜಿ.ಕೂಡಲಗಿಮಠ ಅವರು ವಾದ ಮಂಡಿಸಿದ್ದರು. ಇದನ್ನೂ ಓದಿ: ರಾಜ್ಯಕ್ಕೆ ಬರಗಾಲ ಪರಿಹಾರ ಬಿಡುಗಡೆ ವಿಚಾರವಾಗಿ ಡಿ.23ಕ್ಕೆ ಕೇಂದ್ರದ ಸಭೆ: ಕೃಷ್ಣಬೈರೇಗೌಡ