ಬೆಂಗಳೂರು: ನಕಲಿ ಔಷಧಗಳ ಮಾರಾಟ ಜಾಲದ ಬಗ್ಗೆ ಎಸ್‌ಐಟಿ ತನಿಖೆಯಲ್ಲಿ (Fake Medicine) ಮಹತ್ವದ ಮಾಹಿತಿಗಳು ಬಹಿರಂಗವಾಗಿವೆ. ಜಾಗತಿಕ ಮಾರುಕಟ್ಟೆಯಲ್ಲಿ ಮಾನ್ಯತೆ ಹೊಂದಿರುವ ZAVICEFTA ಮತ್ತು EMBLABEO ಎಂಬ ಎರಡು ಪ್ರಮುಖ ಆ್ಯಂಟಿ ಬಯೋಟಿಕ್ ಔಷಧಗಳನ್ನೇ ಆರೋಪಿಗಳು ಟಾರ್ಗೆಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಈ ಔಷಧಗಳನ್ನು ನಕಲಿ ಪ್ಯಾಕಿಂಗ್‌ನಲ್ಲಿ ಮಾರಾಟ ಮಾಡುತ್ತಿದ್ದ ಜಾಲದ ಕಾರ್ಯವೈಖರಿ ತನಿಖೆ ವೇಳೆ ಬಯಲಾಗಿದೆ.
ZAVICEFTA ಔಷಧದ ಮಾರುಕಟ್ಟೆ ಬೆಲೆ ಸುಮಾರು 5ರಿಂದ 6 ಸಾವಿರ ರೂಪಾಯಿ ಇದೆ. ಇನ್ನು EMBLABEO ಔಷಧದ ಬೆಲೆ ಸುಮಾರು 6 ಸಾವಿರದಿಂದ 7,800 ರೂಪಾಯಿವರೆಗೆ ಇದೆ. ಈ ಔಷಧಗಳನ್ನು ಭಾರತದಲ್ಲಿಯೂ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ ಹಿಮಾಚಲ ಪ್ರದೇಶ, ಹರಿಯಾಣ, ಮಧ್ಯಪ್ರದೇಶ, ಮಹಾರಾಷ್ಟ್ರ ಮತ್ತು ರಾಜಸ್ಥಾನದ ಔಷಧ ತಯಾರಿಕಾ ಕಂಪನಿಗಳು ಹಾಗೂ ಡೀಲರ್‌ಗಳೊಂದಿಗೆ ಆರೋಪಿಗಳು ಸಂಪರ್ಕ ಸಾಧಿಸಿದ್ದರು ಎನ್ನಲಾಗಿದೆ.
ಆರೋಪಿಗಳು ಕಂಪನಿಗಳಿಗೆ ಇಂಡೆಂಟ್ ಸಲ್ಲಿಸಿ ಅಧಿಕೃತವಾಗಿ ಔಷಧಗಳನ್ನು ತರಿಸಿಕೊಳ್ಳುತ್ತಿದ್ದರು. ಬಳಿಕ ಬಿಡದಿಯಲ್ಲಿ ZAVICEFTA ಮತ್ತು EMBLABEO ಹೆಸರಿನ ಬಾಕ್ಸ್‌ಗಳಲ್ಲಿ ಔಷಧಗಳನ್ನು ಮರುಪ್ಯಾಕಿಂಗ್ ಮಾಡಿ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸುಮಾರು 300 ಔಷಧಗಳನ್ನು ಅಂತರರಾಷ್ಟ್ರೀಯ ಗುಣಮಟ್ಟದ ಔಷಧಗಳೆಂದು ಜನರನ್ನು ನಂಬಿಸಿ, ಮಾರುಕಟ್ಟೆ ಮೌಲ್ಯಕ್ಕಿಂತ 26ರಿಂದ 30 ಪಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಏಳು ಮಂದಿಯನ್ನು ಬಂಧಿಸಲಾಗಿದ್ದು, ಎಸ್‌ಐಟಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ತನಿಖೆಯ ಭಾಗವಾಗಿ ಹಿಮಾಚಲ ಪ್ರದೇಶ, ತೆಲಂಗಾಣ ಮತ್ತು ಹರಿಯಾಣದಲ್ಲಿ ದಾಳಿ ನಡೆಸಲಾಗಿದೆ. ಈ ವೇಳೆ ಔಷಧಗಳನ್ನು ತರಿಸಿಕೊಂಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು, ನಕಲಿ ಮೆಡಿಸಿನ್ ಬಾಕ್ಸ್‌ಗಳ ತಯಾರಿಕೆ ಹಾಗೂ ಲೇಬಲ್‌ಗಳ ಮುದ್ರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಕ್ಯಾನ್ಸರ್ ರೋಗಿಗಳಿಗೆ ಕೇಂದ್ರದಿಂದ ಗುಡ್‌ನ್ಯೂಸ್; ಔಷಧಗಳ ದರ ಶೇ. 30ಕ್ಕೆ ಮಿತಿ
ನಕಲಿ ಔಷಧಗಳ ಪೂರೈಕೆ ಮತ್ತು ಮಾರಾಟದ ಹಿಂದಿರುವ ಜಾಲವನ್ನು ಪತ್ತೆಹಚ್ಚಲು ಎಸ್‌ಐಟಿ ತನಿಖೆ ಮುಂದುವರಿಸಿದೆ. ಈ ಪ್ರಕರಣದಲ್ಲಿ ಇನ್ನೂ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆಯೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ: CJP ಪ್ರತಿಭಟನೆಗೆ ಸಜ್ಜು; ಮೆಟ್ರೋ ನಿರ್ಬಂಧ, ರೈಲುಗಳ ರದ್ದು, 23,000 ಪೊಲೀಸರ ನಿಯೋಜನೆ

