DistrictsKarnatakaLatestMain PostRaichur

ರಾಜ್ಯದಲ್ಲಿ ನಕಲಿ ಎಸಿಬಿ ಹಾವಳಿ – ದಾಳಿ ನಡೆಸದೇ ಬಿ-ರಿಪೋರ್ಟ್ ಹಾಕಲು ಲಕ್ಷಾಂತರ ರೂ. ಬೇಡಿಕೆ

– ಎಸಿಬಿ ಅಧಿಕಾರಿಗಳ ಹೆಸರು ದುರ್ಬಳಕೆ ಮಾಡಿ ದಂಧೆ ನಡೆಸಿರುವ ಜಾಲ
– ರಾಯಚೂರಿನಲ್ಲಿ ಮೂವರು ಅಧಿಕಾರಿಗಳಿಗೆ ಬ್ಲಾಕ್ ಮೇಲ್

ರಾಯಚೂರು: ರಾಜ್ಯದಲ್ಲಿ ಮೇಲಿಂದ ಮೇಲೆ ಎಸಿಬಿ ದಾಳಿ ನಡೆದು ಭ್ರಷ್ಟರ ಬೇಟೆ ಸಂಚಲನ ಮೂಡಿಸಿದ ಬೆನ್ನಲ್ಲೇ ನಕಲಿ ಎಸಿಬಿ ಹಾವಳಿ ಶುರುವಾಗಿದೆ. ರಾಯಚೂರು ಸೇರಿ ಹಲವೆಡೆ ಎಸಿಬಿ ಅಧಿಕಾರಿಗಳ ಹೆಸರಲ್ಲಿ ವಿವಿಧ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ ದಾಳಿ ಮಾಡುವ ಬೆದರಿಕೆ ಹಾಕುತ್ತಿದ್ದಾರೆ. ಹಣವನ್ನು ನೀಡಿದೇ ಇದ್ದರೆ ಕೇಸ್ ಕ್ಲೋಸ್ ಮಾಡುತ್ತೇವೆ ಅಂತಿದ್ದಾರೆ. ಭಯಗೊಂಡವರು ಹಣಕೊಟ್ಟರೆ, ಅನುಮಾನ ಬಂದವರು ಪೊಲೀಸ್ ಕೇಸ್ ದಾಖಲು ಮಾಡಿದ್ದಾರೆ.

ಭ್ರಷ್ಟ ಅಧಿಕಾರಿಗಳ ನಿದ್ದೆಕೆಡಿಸುವ ಎಸಿಬಿಯನ್ನೇ ಬಂಡವಾಳ ಮಾಡಿಕೊಂಡ ನಕಲಿ ಎಸಿಬಿ ಗ್ಯಾಂಗ್ ರಾಯಚೂರು ಸೇರಿ ರಾಜ್ಯದ ಯಾದಗಿರಿ, ಬೀದರ್ ಹಾಗೂ ಇತರೆಡೆ ದಾಳಿಯ ಬೆದರಿಕೆ, ಹಣ ವಸೂಲಿ ದಂಧೆ ನಡೆಸಿದೆ. ನೇರವಾಗಿ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ಮಾಡುವ ಈ ನಕಲಿ ಎಸಿಬಿ ಗ್ಯಾಂಗ್, ನಿಮ್ಮ ಇಲಾಖೆಯ ಅಧೀನ ಕಚೇರಿಯ ಇಂತಹ ಅಧಿಕಾರಿ ವಿರುದ್ಧ ಎಸಿಬಿಗೆ ದೂರು ಬಂದಿದೆ. ಅವರನ್ನು ವಿಚಾರಣೆ ಮಾಡಬೇಕು ನಮ್ಮ ಮೊಬೈಲ್ ಸಂಖ್ಯೆಗೆ ಕರೆ ಮಾಡಲು ಹೇಳಿ ಅಂತ ಹೇಳುತ್ತಾರೆ. ಬಳಿಕ ಟಾರ್ಗೆಟ್ ಮಾಡಿರುವವರಿಗೆ ಕರೆ ಮಾಡಿ ಬಿ ರಿಪೋರ್ಟ್ ಹಾಕಲು ಹಣದ ಬೇಡಿಕೆ ಇಡುವುದು ಈ ಜಾಲದ ದಂಧೆಯ ರೂಪ. ಇದನ್ನೂ ಓದಿ: ಮದುವೆ ಸಮಾರಂಭಗಳಿಗೆ ವಿಭಿನ್ನ ಶೈಲಿಯ ಪೇಟ-ಪರಂಪರೆಯ ಕಿರೀಟ

ರಾಯಚೂರು ಎಸಿಬಿ, ಡಿವೈಎಸ್‌ಪಿ ವಿಜಯಕುಮಾರ್ ಹೆಸರಲ್ಲಿ ರಾಯಚೂರು ಜಿಲ್ಲಾ ಪಂಚಾಯತ್ ಸಿಇಓ ನೂರ್ ಜಹಾರ್ ಖಾನಂಗೆ ಕರೆ ಮಾಡಿ ನಿಮ್ಮ ಅಧೀನದ ಜಿ.ಪಂ.ಯೋಜನಾಧಿಕಾರಿ ಟಿ.ರೋಣಿ ಹಾಗೂ ರಾಯಚೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ರಾಮರೆಡ್ಡಿ ವಿರುದ್ದ ದೂರು ಬಂದಿದೆ. ಅಬಕಾರಿ ಉಪ ಆಯುಕ್ತೆ ಲಕ್ಷ್ಮಿ ನಾಯಕ್‍ಗೆ ಕರೆ ಮಾಡಿ ರಾಯಚೂರು ವಲಯದ ಅಬಕಾರಿ ನಿರೀಕ್ಷಕ ಹಣಮಂತ ಗುತ್ತೆದಾರ ವಿರುದ್ಧ ಎಸಿಬಿಗೆ ದೂರು ಬಂದಿದೆ. ಅವರನ್ನ ವಿಚಾರಣೆ ಮಾಡಬೇಕು. ನನ್ನ ನಂಬರ್‍ಗೆ ಕರೆ ಮಾಡಲು ಹೇಳಿ ಅಂತ ತಿಳಿಸಿದ್ದಾರೆ. ಬಳಿಕ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ಹಣದ ಬೇಡಿಕೆ ಇಟ್ಟಿದ್ದಾರೆ.

ನಿಮಗೆ ಸಹಾಯ ಮಾಡಲು ಕರೆ ಮಾಡಿದ್ದೇನೆ. ಹಣ ಫೋನ್ ಪೇ ಇಲ್ಲಾ ಗೂಗಲ್ ಪೇ ಮಾಡದಿದ್ದರೆ, ನಿಮ್ಮಿಷ್ಟ. ಮನೆ ಕಚೇರಿ ಮೇಲೆ ದಾಳಿ ಮಾಡಲು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ. ದಸ್ತಗಿರಿ ಮಾಡುತ್ತೇವೆ, ಇದು ಬೇಕಾ ನಿನಗೆ. ಇಬ್ಬರು ಎಸಿಬಿ ಅಧಿಕಾರಿಗಳು ಶ್ರೀಲಂಕಾ ಮಾನಸ ಸರೋವರ ಟ್ರಿಪ್ ಹೋಗುತ್ತಿದ್ದಾರೆ. ಹಾಗಾಗಿ ತಲಾ 75 ಸಾವಿರ ಒಟ್ಟು ಒಂದು ಲಕ್ಷದ ಐವತ್ತು ಸಾವಿರ ಹಣ ಹಾಕಿ. ಕೇಂದ್ರ ಕಚೇರಿ ಸ್ಟೆನೋ ನವೀನ್ ಕುಮಾರ್, ಉಮೇಶ್ ಕುಮಾರ್ ನಂಬರ್‌ಗೆ ಫೋನ್ ಪೇ, ಗೂಗಲ್ ಪೇ ಮಾಡಿ. ಮಾಡದಿದ್ದರೆ ಮುಂದಿನ ಪರಿಣಾಮ ಎದುರಿಸುತ್ತೀರಿ ಅಂತ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ದ್ವೇಷಕ್ಕೆ ಪ್ರಧಾನ ಮಂತ್ರಿ ಅಂತ್ಯ ಹಾಡಬೇಕು: ಓವೈಸಿ

ನಕಲಿ ಎಸಿಬಿ ಬೆದರಿಕೆ ಕರೆಗೆ ಹೆದರಿ ಕೆಲ ಅಧಿಕಾರಿಗಳು ಹಣವನ್ನು ನೀಡಿದ್ದಾರೆ ಅನ್ನೋ ಮಾಹಿತಿಯಿದೆ. ಆದರೆ ಅನುಮಾನ ಬಂದಿರುವ ರಾಯಚೂರಿನ ಅಧಿಕಾರಿಗಳು ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದ್ದಾರೆ. ಅಧಿಕಾರಿಗಳ ಸಂಪೂರ್ಣ ಮಾಹಿತಿ ಕಲೆ ಹಾಕುವ ನಕಲಿ ಎಸಿಬಿ ಟೀಂ ಬೆದರಿಕೆ, ಹಣ ವಸೂಲಿ ದಂಧೆಯನ್ನು ನಡೆಸಿದೆ. ಪೊಲೀಸರು ನಕಲಿ ಎಸಿಬಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕಿದೆ.

Leave a Reply

Your email address will not be published.

Back to top button