ಚಿಕ್ಕಬಳ್ಳಾಪುರ: ನೀರು ಜೀವ ಉಳಿಸೋ ಅಮೃತ ಆದ್ರೆ ಅಂತಹ ಜೀವಾಮೃತವೇ ವಿಷವಾಗಿದೆ. ಕೈಗಾರಿಕೆಗಳ ದುರ್ಮಾರ್ಗದ ಅವಾಂತರಕ್ಕೆ ಜೀವ ಉಳಿಸೋ ಜೀವಜಲವೇ ವಿಷವಾಗಿ ಮಾರ್ಪಾಡಾಗಿದೆ. ಭೂ ತಾಯಿಯ ಒಡಲಿಗೆ ಕಾರ್ಖಾನೆಗಳು ಬಿಡ್ತಿರೋ ರಾಸಾಯನಿಕ ತ್ಯಾಜ್ಯಗಳಿಂದ ಜೀವ ಜಲವೇ ವಿಷವಾಗಿ ಹೋಗಿದೆ. ಕೊಳವೆಬಾವಿಗಳಿಂದ ಬರ್ತಿರೋ ನೀರು ಕುಡಿಯೋಕೂ ಆಗ್ತಿಲ್ಲ, ಅಡುಗೆ ಮಾಡೋಕೂ ಆಗ್ತಿಲ್ಲ. ಕನಿಷ್ಠ ಬೆಳೆ ಬೆಳೆಯೋಣ ಎಂದರೆ ಅದೂ ಸಾಧ್ಯವಾಗ್ತಿಲ್ಲ.
Advertisement
ಚಿಕ್ಕಬಳ್ಳಾಪುರ ನಗರ ಹೊರವಲಯದ ಕೈಗಾರಿಕಾ ಪ್ರದೇಶದ ಹಿಂಭಾಗದ ರೈತರ ಕೊಳವೆಬಾವಿಗಳಲ್ಲಿ ರಾಸಾಯನಿಕ ಮಿಶ್ರಿತ ನೀರು ಹೊರಬರುತ್ತಿದೆ. ಕೈಗಾರಿಕಾ ಪ್ರದೇಶದ ಅಕ್ಕಪಕ್ಕದ ರೈತರ ಕೊಳವೆಬಾವಿಗಳಲ್ಲಿ ಕೆಮಿಕಲ್ ಮಿಶ್ರಿತ ನೀರು ಹೊರ ಬರುತ್ತಿದ್ದು, ಈ ನೀರು ಕುಡಿದ್ರೆ ಬಾಯಿ ಸುಟ್ಟ ಅನುಭವವಾಗುತ್ತಿದೆಯಂತೆ. ಆಡುಗೆಗೆ ಬಳಸಿದ್ರೆ ಮಾಡಿದ ಆಡುಗೆಯೆಲ್ಲಾ ಹಳಸಿ ಹಾಳಾಗುತ್ತೆ. ಬಟ್ಟೆ ತೊಳೆದ್ರೆ ಬಟ್ಟೆಯ ಮೇಲೆಲ್ಲಾ ಕೆಂಪು ಬಣ್ಣದ ಕಲೆಗಳು ಮೂಡುತ್ತೆ. ಇನ್ನೂ ಕನಿಷ್ಠ ಬೆಳೆ ಬೆಳೆಯೋಣ ಅಂದ್ರೆ ಹಾಕಿದ ಬೆಳೆಗಳೆಲ್ಲಾ ಒಣಗಿ ಹೋಗ್ತಿವೆ ಎಂದು ಸ್ಥಳೀಯ ರೈತರು ಆರೋಪ ಮಾಡುತ್ತಿದ್ದಾರೆ.
Advertisement
Advertisement
ಕಾರಣವೇನು?: ಕೈಗಾರಿಕಾ ಪ್ರದೇಶದ ರಾಮ ರಾಸಾಯನಿಕ, ಸೌತರ್ನ್ ಆಗ್ರೋ, ಡೈನಾಕ್ಷ್ ಪ್ರೈವೇಟ್ ಹಾಗೂ ಇತರೆ ಕೆಲ ಕಾರ್ಖಾನೆಗಳಲ್ಲಿನ ರಾಸಾಯನಿಕ ನೀರು ಸದ್ದಿಲ್ಲದೇ ಭೂ ತಾಯಿಯ ಒಡಲು ಸೇರುತ್ತಿದೆ. ರೈತರ ಸಹಾಯಕ್ಕೆ ಧಾವಿಸಿರೋ ಮಾನವ ಹಕ್ಕುಗಳು ಜಾಗೃತಿ ಸಮಿತಿ ಸಂಘಟನೆಯ ಸದಸ್ಯರು ಕಾರ್ಖಾನೆಗಳ ಮೇಲೆ ದಾಳಿ ನಡೆಸಿದಾಗ ಇದರ ಆಸಲಿಯತ್ತು ಕೂಡ ಬಯಲಾಯಿತು. ಹಲವು ಕಾರ್ಖಾನೆಗಳ ರಾಸಾಯನಿಕ ನೀರನ್ನು ಭೂಮಿಗೆ ಬಿಟ್ಟಿರೋದು ಕಂಡು ಬಂದಿದೆ.
Advertisement
ಲಕ್ಷಾಂತರ ರೂಪಾಯಿ ಸಾಲ ಮಾಡಿ ಕೊಳವೆಬಾವಿ ಕೊರೆಸಿ ಬೆಳೆ ಬೆಳೆಯೋಣ ಅಂದ್ರೆ ಕೈಗಾರಿಕೆಗಳ ದುಡ್ಡು ಬಾಕತನಕ್ಕೆ ಅನ್ನದಾತರು ಈಗ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಈಗಾಲಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಭೂತಾಯಿಯ ಒಡಲಿಗೆ ಸೇರ್ತಿರೋ ವಿಷಕ್ಕೆ ಬ್ರೇಕ್ ಹಾಕಬೇಕಿದೆ. ಇದನ್ನೆಲ್ಲಾ ನೋಡಬೇಕಾದ ಜಿಲ್ಲಾಡಳಿತ ಅದ್ಯಾವಾಗ ನಿದ್ದೆಯಿಂದ ಎದ್ದೇಳುತ್ತೋ ಎಂದು ಜನರು ಪ್ರಶ್ನಿಸುತ್ತಿದ್ದಾರೆ.
ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಟಿವಿಯಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಡಿಸಿ ದೀಪ್ತಿ ಆದಿತ್ಯಾ ಕಾನಡೆ ಪ್ರತಿಕ್ರಿಯೆ ನೀಡಿದ್ದು, ಕೈಗಾರಿಕೆಗಳು ರಾಸಾಯನಿಕ ತ್ಯಾಜ್ಯದ ನೀರನ್ನು ಭೂಮಿಗೆ ಬಿಟ್ಟಿರುವುದು ಕಂಡುಬಂದಿದೆ. ದೂರು ಬಂದ ದಿನವೇ ಪರಿಸರ ಮಾಲಿನ್ಯ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈಗಾಗಲೇ ಎರಡು ಕಾರ್ಖಾನೆಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದ್ದು, ಕೊಳವೆಬಾವಿಗಳ ನೀರನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ ಎಂದು ಹೇಳಿದ್ದಾರೆ.