FACT CHECK: ಮಂಗಳೂರು ಪೊಲೀಸರಿಗೆ 10 ಲಕ್ಷ ರೂ. ಬಹುಮಾನ

Public TV
1 Min Read
fact chek mangaluru police letter

ಮಂಗಳೂರು: ಕಳೆದ ವಾರ ನಡೆದ ಗಲಭೆ ವೇಳೆ ಉತ್ತಮವಾಗಿ ಕಾರ್ಯನಿರ್ವಹಿಸಿದ ಮಂಗಳೂರಿನ 148 ಪೊಲೀಸರಿಗೆ 10 ಲಕ್ಷ ರೂ. ಬಹುಮಾನ ನೀಡಲಾಗಿದೆ ಎಂಬ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದೊಂದು ಸುಳ್ಳು ಸುದ್ದಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಹರ್ಷ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಹರ್ಷ ಅವರು, ಕೆಲ ಕಿಡಿಗೇಡಿಗಳು ಇಲಾಖೆಯ ಹೆಸರಿನಲ್ಲಿ ತಪ್ಪು ಸಂದೇಶಗಳನ್ನು ರವಾನಿಸುತ್ತಿದ್ದಾರೆ. ಅಧಿಕೃತ ಸಂವಹನದಂತೆ ತಪ್ಪು ಮಾಹಿತಿಯನ್ನು ಕಳುಹಿಸಲಾಗುತ್ತದೆ. ಈ ಸುಳ್ಳು ಮಾಹಿತಿಗಳನ್ನು ಯಾರೂ ನಂಬಬೇಡಿ ಎಂದು ನಾನು ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಿಂದ ರಾಜ್ಯ ಪೊಲೀಸ್ ಮಹಾ ನಿರೀಕ್ಷರಿಗೆ ಪತ್ರವನ್ನು ಡಿ.25 ರಂದು ಬರೆಯಲಾಗಿದ್ದು, ಇದರಲ್ಲಿ ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಅಧಿಕಾರಿ/ ಸಿಬ್ಬಂದಿಗೆ ನಗದು ಬಹುಮಾನ ನೀಡಿದ ಬಗ್ಗೆ ಉಲ್ಲೇಖವಿತ್ತು. ಕರ್ನಾಟಕ ಪೊಲೀಸ್ ಲೆಟರ್ ಹೆಡ್ ಇದ್ದ ಕಾರಣ ಇದು ಅಧಿಕೃತ ಪತ್ರವೆಂದೇ ತಿಳಿದು ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪತ್ರದಲ್ಲಿ ಏನಿತ್ತು?
ಕೇಂದ್ರ ಸರ್ಕಾರ ಇತ್ತೀಚೆಗೆ ಮಂಡಿಸಿದ ಸಿಎಬಿ ಮತ್ತು ಎನ್‌ಆರ್‌ಸಿ ಮಸೂದೆಯ ವಿರುದ್ಧವಾಗಿ ದಿನಾಂಕ ಡಿ.19 ರಂದು ಮಂಗಳೂರು ನಗರದಲ್ಲಿ ಕಾನೂನು ಸುವ್ಯವಸ್ಥೆಗೆ ತೀವ್ರವಾಗಿ ಭಂಗ ಉಂಟಾಗಿದ್ದು, ಪ್ರತಿಭಟನಾ ನಿರತ ವ್ಯಕ್ತಿಗಳು ಪೊಲೀಸ್ ಅಧಿಕಾರಿ/ ಸಿಬ್ಬಂದಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟುಮಾಡಿರುತ್ತಾರೆ. ಆದ ಕಾರಣ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕರ್ಫ್ಯೂ ಜಾರಿ ಮಾಡಲಾಗಿರುತ್ತದೆ. ಈ ಪರಿಸ್ಥಿತಿಯನ್ನು ನಿಯಂತ್ರಿಸಲು ಹಾಗೂ ನಗರದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಹಗಲು ರಾತ್ರಿ ಅವಿರತ ಪರಿಶ್ರಮ ನಡೆಸಿರುತ್ತಾರೆ. ಆದ್ದರಿಂದ ಈ ಕೆಳಕಂಡ ಅಧಿಕಾರಿ/ ಸಿಬ್ಬಂದಿ ಅವರ ಶ್ಲಾಘನೀಯ ಸೇವೆಯನ್ನು ಗುರುತಿಸಿ ನಗದು ಬಹುಮಾನವನ್ನು ನೀಡಲಾಗಿದೆ ಎಂಬ ವಿಷಯವನ್ನು ಮಾನ್ಯರ ಅವಗಾಹನೆಗೆ ಈ ಮೂಲಕ ತರುತ್ತಿದ್ದೇನೆ.

 

Mangalore Letter 1 fake scaled

Share This Article
Leave a Comment

Leave a Reply

Your email address will not be published. Required fields are marked *