ಹಾಲು ತರಲು ಬರುತ್ತಿದ್ದ ಮಹಿಳೆಯ ಬೆನ್ನ ಹಿಂದೆ ಬಿದ್ದ ಹುಡುಗರು

Public TV
2 Min Read
couple

– ಬೇಡಿಕೆ ಈಡೇರಿಸುವಂತೆ ಬ್ಲ್ಯಾಕ್‍ಮೇಲ್

ಹೈದರಾಬಾದ್: ಫೇಸ್‍ಬುಕ್ ಮೂಲಕ ಪರಿಚಯವಾದ ನಾಲ್ವರು ಯುವಕರು ವಿವಾಹಿತ ಮಹಿಳೆಗೆ ಅತ್ಯಾಚಾರ ಎಸಗುವುದಾಗಿ ಬೆದರಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

ರಾಯದುರ್ಗಂ ಗ್ರಾಮದ ವಿವಾಹಿತ ಮಹಿಳೆ ನಾಲ್ವರು ಯುವಕರು ಅತ್ಯಾಚಾರ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾಳೆ.

facebook logo

ಏನಿದು ಪ್ರಕರಣ?
ಕರ್ನಾಟಕದ ಯುವತಿ ನಾಲ್ಕು ವರ್ಷಗಳ ಹಿಂದೆ ರಾಯದುರ್ಗಂ ಪಟ್ಟಣದ ವ್ಯಕ್ತಿಯನ್ನು ಮದುವೆಯಾಗಿದ್ದಳು. ಈ ದಂಪತಿಗೆ ಮೂರು ವರ್ಷದ ಮಗನಿದ್ದಾನೆ. ಕಳೆದ ಒಂದು ವರ್ಷದಿಂದ ಮಹಿಳೆ ಮುಂಜಾನೆ ತಮ್ಮ ಮನೆಯ ಸಮೀಪದ ಅಂಗಡಿಗೆ ಹೋಗಿ ಹಾಲು ತರುತ್ತಿದ್ದಳು. ದಿನ ಕಳೆದಂತೆ ಅದೇ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹೇಶ್ ಪರಿಚಯವಾಗಿದ್ದನು ಎಂದು ಪೊಲಿಸರು ತಿಳಿಸಿದ್ದಾರೆ.

love 1

ಪರಿಚಯ ಸ್ನೇಹವಾಗಿ ಇಬ್ಬರು ತುಂಬಾ ಸಮಯ ಫೇಸ್‍ಬುಕ್ ಮೂಲಕ ಚಾಟಿಂಗ್ ಮಾಡುತ್ತಿದ್ದರು. ಆಗ ಮಹೇಶ್ ತನ್ನ ಸ್ನೇಹಿತರಾದ ಅದೇ ಪಟ್ಟಣದ ಪವನ್, ಚಿಯೆಟಿ ಮಲ್ಲಿಕಾರ್ಜುನ ಮತ್ತು ಫಾರೂಕ್ ಮೂವರನ್ನು ಫೇಸ್‍ಬುಕ್ ಮೂಲಕ ಮಹಿಳೆಗೆ ಪರಿಚಯಿಸಿದ್ದನು. ಮಹಿಳೆಯೂ ಕೂಡ ಅವರನ್ನು ಸ್ನೇಹಿತರಾಗಿ ಒಪ್ಪಿಕೊಂಡು ಎಲ್ಲರ ಜೊತೆ ಚಾಟಿಂಗ್ ಮಾಡುತ್ತಿದ್ದಳು.

Police Jeep

ಇದೇ ವೇಳೆ ಯುವಕರು ಮಹಿಳೆ ನಂಬರ್ ತೆಗೆದುಕೊಂಡಿದ್ದು, ಫೇಸ್‍ಬುಕ್ ಚಾಟಿಂಗ್ ಮೂಲಕ ಮೂವರು ಸ್ನೇಹಿತರು ಆಕೆಯ ವೈಯಕ್ತಿಕ ಮತ್ತು ಕುಟುಂಬದ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದರು. ನಂತರ ಅದೇ ವಿಚಾರವನ್ನು ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲದೇ ತಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಆ್ಯಸಿಡ್ ಎರಚುವುದಾಗಿ, ಅತ್ಯಾಚಾರ ಮಾಡುವುದಾಗಿ ನಾಲ್ವರು ಲೈಂಗಿಕ ಕಿರುಕುಳ ನೀಡಲು ಶುರು ಮಾಡಿದ್ದರು ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.

arrest

ಕೊನೆಗೆ ಮಹಿಳೆ ಯುವಕರ ಕಿರುಕುಳವನ್ನು ಸಹಿಸಲಾಗದೆ ನಿದ್ದೆ ಮಾತ್ರೆಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಗ ನಡೆದ ಘಟನೆಯ ಬಗ್ಗೆ ಪತಿ ಮತ್ತು ಚಿಕ್ಕಮ್ಮ ಬಳಿ ಹೇಳಿಕೊಂಡಿದ್ದಾಳೆ. ನಂತರ ಅವರ ಸಹಾಯದಿಂದ ಪೊಲೀಸರಿಗೆ ದೂರು ನೀಡಿದ್ದಾಳೆ.

ಮಹಿಳೆ ನೀಡಿದ ದೂರಿನ ಅನ್ವಯ ಪೊಲೀಸರು ನಾಲ್ವರ ವಿರುದ್ಧ ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ನಾಲ್ವರನ್ನು ಬಂಧಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *