Connect with us

Districts

ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡ್ವಿ, ಆದ್ರೆ ಮಚ್ಚಿನಿಂದ ಹೊಡೆದು ಓಡಿ ಹೋದ: ಪ್ರತ್ಯಕ್ಷದರ್ಶಿ

Published

on

ಮೈಸೂರು: ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡಿದ್ವಿ, ಆದರೆ ಆತ ಮಚ್ಚಿನಿಂದ ಹೊಡೆದು ಓಡಿ ಹೋದ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಶಾಸಕ ತನ್ವೀರ್ ಸೇಠ್ ಚಾಕು ಇರಿತ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಭಾನುವಾರ ರಾತ್ರಿ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಬನ್ನಿ ಮಂಟಪ ಸಮೀಪದ ಪಾರ್ಟಿ ಹಾಲಿಗೆ ತಮ್ಮ ಆತ್ಮೀಯ ಮಗನ ಮದುವೆಯ ಬೀಗರೂಟಕ್ಕೆ ಆಗಮಿಸಿದ್ದರು. ಈ ವೇಳೆ ಯುವಕ ಫರಾನ್ (24) ಚಾಕುವಿನಿಂದ ಹಲ್ಲೆ ಮಾಡಿದ್ದಾನೆ.

ಸಮಾರಂಭದಲ್ಲಿ ಕುಳಿತಿದ್ದ ತನ್ವೀರ್ ಸೇಠ್‍ಗೆ ಅವರ ಬಳಿ ಬಂದ ಫರಾನ್ ಚಾಕುವಿನಿಂದ ಕುತ್ತಿಗೆ ಭಾಗಕ್ಕೆ ಇರಿದು ಪರಾರಿಯಾಗಲು ಪ್ರಯತ್ನಿಸಿದಾಗ ಸ್ಥಳೀಯರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಾಳು ತನ್ವೀರ್ ಸೇಠ್ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಫರಾನ್ ಎಸ್‍ಡಿಪಿಐ ಕಾರ್ಯಕರ್ತನಾಗಿದ್ದು ಹಲ್ಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಈ ಸಂಬಂಧ ನರಸಿಂಹರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಫರಾನ್ ಅನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತರಾದ ಕೆ.ಟಿ ಬಾಲಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಹೇಗಾಯ್ತು ಎಂಬುದನ್ನು ಪ್ರೊಫೆಸರ್ ನಬಿಜಾನ್ ಅವರು ಮಾಧ್ಯಮಗಳಿಗೆ ವಿವರಿಸಿದ್ದಾರೆ.

ಪ್ರತ್ಯಕ್ಷದರ್ಶಿ ವಿವರಿಸಿದ್ದು ಹೀಗೆ:
ರಾತ್ರಿ 10 ಗಂಟೆಯ ವೇಳೆ ಬೀಗರೂಟ ಮಾಡಿದ ಮೇಲೆ ಸಂತೋಷವಾಗಿ ಎಲ್ಲಾ ಬಂದ್ವಿ. ಮುಂಬೈನಿಂದ ಗಾಯಕ ಬಂದಿದ್ದಾರೆ ಬನ್ನಿ ಸಾರ್ ಒಂದು ಹಾಡು ಹಾಡಿಸುತ್ತೇನೆ ಎಂದು ಅವರ ಮತ್ತೊಬ್ಬ ಸ್ನೇಹಿತರು ಕರೆದರು. ಅವರು ಕರೆದಾಗ ನಾವೆಲ್ಲಾ ಮುಂದಿನ ಸಾಲಿನಲ್ಲಿ ಕುಳಿತಿದ್ದೆವು.

ಗಾಯಕ ತುಂಬಾ ಚೆನ್ನಾಗಿ ಹಾಡುತ್ತಿದ್ದರು. ಅವರು ಹಾಡು ಹಾಡುತ್ತಲೇ ವೇದಿಕೆಯಿಂದ ಕೆಳಗೆ ಇಳಿದು ಶಾಸಕರ ಮುಂದೆ ನಿಂತು ಹಾಡು ಹಾಡಲು ಶುರು ಮಾಡಿದರು. ಆ ಸಮಯದಲ್ಲಿ ನಾವು ಹಾಡು ಎಂಜಾಯ್ ಮಾಡುತ್ತಿದ್ದೇವು. ಈ ನಡುವೆ ವ್ಯಕ್ತಿಯೊಬ್ಬ ಬಲಗೈಯಲ್ಲಿ ಒಂದು ಕಾಲು ಅಡಿಯಷ್ಟು ಮಚ್ಚು ಹಿಡಿದುಕೊಂಡಿದ್ದನು. ಬಳಿಕ ಮಚ್ಚಿನಿಂದ ಒಂದು ಏಟು ಹೊಡೆದು ಓಡಿ ಹೋದ.

ಸಾಮಾನ್ಯವಾಗಿ ಜನರು ತನ್ವೀರ್ ಅವರ ಬಳಿ ಸೆಲ್ಫಿ ಕೇಳುತ್ತಾರೆ. ಅವರ ಬಳಿ ಮಾತನಾಡುತ್ತಾರೆ. ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಾರೆ. ಆ ವ್ಯಕ್ತಿ ಬಂದಾಗ ನಾನು ಹೀಗೆ ಎಂದುಕೊಂಡಿದ್ದೆ. ಆದರೆ ತನ್ವೀರ್ ಅವರ ದೇಹದ ಮೇಲೆ ರಕ್ತ ಬರುವುದನ್ನು ನೋಡಿ ರಕ್ತ, ರಕ್ತ ಎಂದು ಜೋರಾಗಿ ಕಿರುಚಿಕೊಂಡೆ. ನಾನು ಆ ವ್ಯಕ್ತಿ ಹಿಂದೆ ಓಡಲು ಆಗಲಿಲ್ಲ. ಏಕೆಂದರೆ ತನ್ವೀರ್ ಅವರು ರಕ್ತದ ಮಡುವಿನಲ್ಲಿದ್ದರು. ನಾನು ಅವರ ಕೈ ಹಿಡಿದುಕೊಂಡು ಕಾರಿನವರೆಗೂ ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದೆ.

ತನ್ವೀರ್ ಅಂತಹ ಒಳ್ಳೆಯ ವ್ಯಕ್ತಿ, ಜನಪರ ವ್ಯಕ್ತಿ, ಅವರು ಮುಗ್ಧ ಮನಸ್ಸಿನ ಮಗುವಿನಂತಹ ಮನುಷ್ಯ, ಇವರ ಮೇಲೆ ಇಂದು ಮಾರಣಾಂತಿಕ ಹಲ್ಲೆ ಆಗಿದ್ದು, ಇದನ್ನು ಖಂಡಿಸಬೇಕು. ಅವರ ಆರೋಗ್ಯ ಸರಿ ಹೋಗಲಿ ಹಾಗೂ ಮತ್ತೆ ನಮ್ಮ ಜೊತೆ ಬೆರೆಯಲಿ. ದೇವರು ಅವರಿಗೆ ಆರೋಗ್ಯ ಕೊಡಲಿ ಹಾಗೂ ಅವರಿಗೆ ಏನೂ ಆಗದೇ ಇರಲಿ ಎಂದು ಕೇಳಿಕೊಳ್ಳುತ್ತೇನೆ. ಈಗ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಎಲ್ಲರೂ ಅವರಿಗಾಗಿ ಪ್ರಾರ್ಥನೆ ಮಾಡಿ ಎಂದು ಮನವಿ ಮಾಡಿಕೊಂಡರು.

ವೈದ್ಯರು ನಮಗೆ ಒಳಗೆ ಬಿಡುತ್ತಿಲ್ಲ. ರೆಡ್ ಜಾಕೆಟ್ ಹಾಕಿದ ವ್ಯಕ್ತಿ ತನ್ವೀರ್ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯುತ್ತಿದ್ದಾನೆ ಎಂದುಕೊಂಡಿದ್ದೇವು. ಆದರೆ ಆತ ಮಚ್ಚಿನಿಂದ ಒಂದು ಏಟು ಹೊಡೆದು ಓಡಿ ಹೋದ. ಬಳಿಕ ಆ ಮಚ್ಚನ್ನು ಅಲ್ಲಿಯೇ ಎಸೆದು ಓಡಿ ಹೋದ. ಈಗ ಮಚ್ಚು ಸಿಕ್ಕಿದೆ. ತನ್ವೀರ್ ಮೇಲೆ ಯಾವುದೇ ತರಹದ ಭ್ರಷ್ಟಚಾರ, ಹಗರಣದ ಆರೋಪಗಳಿಲ್ಲ. ಆದರೆ ವ್ಯಕ್ತಿ ಏಕೆ ಹಲ್ಲೆ ಮಾಡಿದ್ದಾನೆ ಎಂಬುದರ ಮಾಹಿತಿ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

Click to comment

Leave a Reply

Your email address will not be published. Required fields are marked *