ನವದೆಹಲಿ: ಲೋಕಸಭೆ ಚುನಾವಣೆ (Lok Sabha Polls) ತಯಾರಿ ಭಾಗವಾಗಿ ಇಂದಿನಿಂದ ಎರಡು ದಿನಗಳ ಕಾಲ ದೆಹಲಿಯಲ್ಲಿ ಬಿಜೆಪಿ ತನ್ನ ರಾಷ್ಟ್ರೀಯ ಮಂಡಳಿ ಹೈವೋಲ್ಟೇಜ್ ಸಭೆ ನಡೆಸಲಿದೆ.
ದೆಹಲಿಯ ಭಾರತ್ ಮಂಟಪದಲ್ಲಿ ನಡೆಯಲಿರುವ ಸಭೆಯಲ್ಲಿ ದೇಶದ್ಯಾಂತ 11,500ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿಯಾಗಲಿದ್ದು ಪ್ರಧಾನಿ ನರೇಂದ್ರ ಮೋದಿ (Narendra Modi) ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದನ್ನೂ ಓದಿ: ರಾಮ ಕಾಲ್ಪನಿಕ ಎಂದಿದ್ದ ಕಾಂಗ್ರೆಸ್ ಈಗ ಜೈ ಶ್ರೀರಾಮ್ ಜಪಿಸ್ತಿದೆ: ಮೋದಿ ವಾಗ್ದಾಳಿ
2014 ಮತ್ತು 2019ರ ಸಾರ್ವತ್ರಿಕ ಚುನಾವಣೆಗಳಿಗೆ ಮುಂಚಿತವಾಗಿ ಆಯೋಜಿಸಲಾದ ಸಭೆಗಳಂತೆಯೇ ರಾಷ್ಟ್ರೀಯ ಮಂಡಳಿಯನ್ನು ಈ ಬಾರಿಯೂ ನಿಗದಿಪಡಿಸಲಾಗಿದೆ. ಸಭೆಯು ಸಮಗ್ರ ಸಾಂಸ್ಥಿಕ ಕಾರ್ಯಸೂಚಿಯನ್ನು ಹೊಂದಿರಲಿದೆ. ಮುಂಬರುವ ಲೋಕಸಭೆ ಚುನಾವಣೆ ತಯಾರಿ, 10 ವರ್ಷಗಳ ಕೇಂದ್ರ ಸರ್ಕಾರದ ಸಾಧನೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಕಾರ್ಯಕ್ರಮದ ಉದ್ಘಾಟನಾ ಭಾಷಣ ಮಾಡಲಿದ್ದು, ಮರುದಿನ ಪ್ರಧಾನಿ ನರೇಂದ್ರ ಮೋದಿ ಮಾತನಾಡಲಿದ್ದಾರೆ. ಈ ನಡುವೆ ಗೃಹ ಸಚಿವ ಅಮಿತ್ ಶಾ ಒಳಗೊಂಡಂತೆ ಹಲವು ಪ್ರಮುಖ ಸಚಿವರು ಸರ್ಕಾರದ ಸಾಧನೆಗಳ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಪಕ್ಷದ ಆಪ್ತ ಮೂಲಗಳು ತಿಳಿಸಿವೆ.
ಇದೇ ವೇಳೆ `ವಿಕಸಿತ್ ಭಾರತ್’ ಅಭಿಯಾನದ ಕುರಿತು ಪ್ರದರ್ಶನ ಇರಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯದ ಬಿಜೆಪಿ ಹಿರಿಯ ನಾಯಕರು, ಶಾಸಕರು, ಮಾಜಿ ಶಾಸಕರು, ಬಿಜೆಪಿ ಆಡಳಿತದ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಎಲ್ಲ ಹಂತದ ನಾಯಕರಿಗೆ ಆಹ್ವಾನ ನೀಡಲಾಗಿದೆ. ಒಟ್ಟು 530 ರಾಜ್ಯ ನಾಯಕರಿಗೆ ಆಹ್ವಾನ ನೀಡಿದ್ದು, ಕನಿಷ್ಠ 400 ಮಂದಿ ನಾಯಕರು ಭಾಗಿಯಾಗುವ ನಿರೀಕ್ಷೆಯಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ ಕೇಸ್ – 108 ಆರೋಪಿಗಳಿಗೆ ಜಾಮೀನು, ದರ್ಗಾದಲ್ಲಿ ಸಂಭ್ರಮಾಚರಣೆ