– ನನ್ನ ಹೆಂಡತಿಗೂ ಅನ್ವಯ ಆಗುತ್ತೆ ಎಂದ ಸಿಎಂ
– BMTCಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ
ಬೆಂಗಳೂರು: 5 ಗ್ಯಾರಂಟಿಗಳನ್ನ ಪ್ರಸ್ತುತ ಆರ್ಥಿಕ ವರ್ಷದಲ್ಲೇ ಜಾರಿಗೊಳಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಕೊನೆಗೂ ಒಪ್ಪಿಗೆ ಸೂಚಿಸಿದೆ.
ಶುಕ್ರವಾರ ಕ್ಯಾಬಿನೆಟ್ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಗೃಹಜ್ಯೋತಿ ಯೋಜನೆ, ಗೃಹಲಕ್ಷ್ಮಿ ಯೋಜನೆ, ಅನ್ನಭಾಗ್ಯ ಯೋಜನೆ ಹಾಗೂ ಯುವನಿಧಿ ಯೋಜನೆ ಹಾಗೂ ಶಕ್ತಿ ಯೋಜನೆಗಳಿಗೆ ಒಪ್ಪಿಗೆ ಸೂಚಿಸಿದೆ. ಅದರಲ್ಲೂ ತೀವ್ರ ಕುತೂಹಲ ಕೆರಳಿಸಿದ್ದ ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಜೂನ್ 11 ರಿಂದ ಜಾರಿಗೆ ಬರಲಿದೆ.
ಸಮಾಜದಲ್ಲಿ 50%ರಷ್ಟು ಮಹಿಳೆಯರಿದ್ದು, ಸ್ಥಾನಮಾನ ಪರಿಗಣಿಸದೇ ವಿದ್ಯಾರ್ಥಿನಿಯರನ್ನೂ ಒಳಗೊಂಡಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ರಾಜ್ಯದೊಳಗೆ ಸರ್ಕಾರದ ಸಾಮಾನ್ಯ ಬಸ್, ಎಕ್ಸ್‌ಪ್ರೆಸ್, ರಾಜಹಂಸ, ಬಿಎಂಟಿಸಿ, ಕೆಎಸ್‌ಆರ್‌ಟಿಸಿ (ಎಸಿ ಬಸ್,ಐಶಾರಾಮಿ ಬಸ್,ಎಸಿ ಸ್ಲೀಪರ್,ರಾಜಹಂಸ ಬಸ್ ಗೆ ಉಚಿತ ಪ್ರಯಾಣ ಅನ್ವಯ ಇಲ್ಲ) ಬಸ್‌ಗಳಲ್ಲಿ ಉಚಿತ ಪ್ರಯಾಣ (Free Bus For Women) ಇರಲಿದೆ. KSRTC ಬಸ್‌ನಲ್ಲಿ 50% ರಷ್ಟು ಆಸನ ಪುರುಷರಿಗೆ ಮೀಸಲಾಗಿರುತ್ತೆ. ಇಡೀ ಬಸ್‌ನಲ್ಲಿ ಪೂರ್ಣ ಮಹಿಳೆಯರೇ ಹೋಗುವಂತಿಲ್ಲ, ಜೊತೆಗೆ BMTCಯಲ್ಲಿ ಇನ್ನು ಮುಂದೆ ಮಹಿಳೆಯರಿಗೆ ಪ್ರತ್ಯೇಕ ಸೀಟು ಮೀಸಲಾತಿ ಇರೋದಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಶಕ್ತಿ ಯೋಜನೆ ರಾಜ್ಯದೊಳಗೆ ಮಾತ್ರ ಅನ್ವಯವಾಗಲಿದೆ. ಬೆಂಗಳೂರಿನಿಂದ ಬೆಳಗಾವಿಗೂ ಹೋಗಬಹುದು. ಆದ್ರೆ ಬೆಂಗಳೂರಿನಿಂದ ಹೈದರಾಬಾದ್ ಅಥವಾ ತಿರುಪತಿಗೆ ಹೋಗ್ತೀನಿ ಅಂದ್ರೆ ಅನ್ವಯವಾಗಲ್ಲ. ಇದರಿಂದ ಶೇ.94% ರಷ್ಟು ಪ್ರಯಾಣಿಕರನ್ನು ಒಳಗೊಳ್ಳಲಿದೆ ಎಂದು ತಿಳಿಸಿದ್ದಾರೆ.