ಕೇರಳದ (Kerala) ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ರಾಜ್ಯದ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ವಿಶೇಷ ಅಧಿವೇಶನದಲ್ಲಿ ಕಡು ಬಡತನ (Extreme Poverty) ಮುಕ್ತ ರಾಜ್ಯ ಎಂದು ಘೋಷಿಸಿದ್ದಾರೆ. ಈ ಮೂಲಕ ಬಡತನ ಮುಕ್ತ ರಾಜ್ಯ ಎಂದು ಘೋಷಿಸಿಕೊಂಡ ಭಾರತದ ಮೊದಲ ರಾಜ್ಯ ಕೇರಳ ಎಂಬ ಹೆಮ್ಮೆಗೆ ಪಾತ್ರವಾಗಿದೆ. ಕೇರಳದ ಈ ಸಾಧನೆಗೆ ಸರ್ಕಾರ ಕೈಗೊಂಡ ಕ್ರಮವೇನು? ಇದು ಹೇಗೆ ಸಾಧ್ಯವಾಯಿತು. ಈ ಬಗ್ಗೆ ವಿಕ್ಷಗಳು ಹೇಳಿದ್ದೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಬಡತನ ಮುಕ್ತಕ್ಕೆ 5 ವರ್ಷಗಳ ಪ್ರಯತ್ನ
ಕಡು ಬಡತನ ಮುಕ್ತಗೊಳಿಸಲು 2021 ರಲ್ಲಿ ಕೇರಳ ಸರ್ಕಾರ ಬಡತನ ನಿರ್ಮೂಲನೆ ಯೋಜನೆಯನ್ನು ಪ್ರಾರಂಭಿಸಿತ್ತು. ತಳಮಟ್ಟದ ಸಮೀಕ್ಷೆ ಮೂಲಕ ಬಡತನ ನಿರ್ಮೂಲನೆಗೆ ಹಲವು ಕ್ರಮಗಳನ್ನು ಕೈಗೊಂಡಿರುವುದಾಗಿ ವಿಜಯನ್ ಅವರು ಹೇಳಿದ್ದಾರೆ.
ವಿಶ್ವ ಬ್ಯಾಂಕ್ ಮಾನದಂಡವೇನು?
ವಿಶ್ವ ಬ್ಯಾಂಕ್ ನಿಗದಿ ಪಡಿಸಿದ ಮಾನದಂಡದ ಪ್ರಕಾರ ದಿನಕ್ಕೆ ಒಬ್ಬ ವ್ಯಕ್ತಿಗೆ 180 ರೂ. ಕ್ಕಿಂತ ಕಡಿಮೆ ಆದಾಯದಲ್ಲಿ ಜೀವನ ನಡೆಸುವುದು ಕಡು ಬಡತನವಾಗಿದೆ. ಇದರ ಜೊತೆ ಭಾರತದ ಬಹು-ಆಯಾಮದ ಬಡತನ ಸೂಚ್ಯಂಕ, ಪೌಷ್ಟಿಕಾಂಶ, ವಸತಿ, ನೈರ್ಮಲ್ಯ, ಶಿಕ್ಷಣ ಮತ್ತು ಮೂಲ ಸೇವೆಗಳ ಲಭ್ಯತೆಯಂತಹ ಅಂಶಗಳನ್ನು ಪರಿಗಣಿಸಲಾಗುತ್ತದೆ. ನೀತಿ ಆಯೋಗದ 2023ರ ಬಡತನ ಸೂಚ್ಯಂಕ ವರದಿಯ ಪ್ರಕಾರ, ಕೇರಳದ ಜನಸಂಖ್ಯೆಯಲ್ಲಿ ಕೇವಲ 0.55% ಮಾತ್ರ ಬಡವರಿದ್ದರು. ಇದು ದೇಶದಲ್ಲೇ ಅತಿ ಕಡಿಮೆ ಪ್ರಮಾಣವಾಗಿತ್ತು.
ಗ್ರಾಮೀಣ ಜನಸಂಖ್ಯೆಯ 1% ರಷ್ಟು ಮತ್ತು ನಗರ ಜನಸಂಖ್ಯೆಯ 2% ರಷ್ಟು ಬಡತನ ರೇಖೆಗಿಂತ ಕೆಳಗಿರುವ ರಾಜ್ಯದ ಜನರ ಪ್ರಗತಿಯಿಂದ ತೀವ್ರ ಬಡತನ ನಿರ್ಮೂಲನೆ ಮಾಡಿದ ಮೊದಲ ಭಾರತೀಯ ರಾಜ್ಯ ಎಂಬ ಹೆಗ್ಗಳಿಕೆಗೆ ಕೇರಳ ಪಾತ್ರವಾಗಿದೆ ಎಂದು ಸಿಎಂ ವಿಜಯನ್ ಹೇಳಿಕೊಂಡಿದ್ದಾರೆ.
ಸರ್ಕಾರ ಕೈಗೊಂಡ ಕ್ರಮಗಳೇನು?
ಕೇರಳ ಸರ್ಕಾರ 2021 ರಲ್ಲಿ ಕಡು ಬಡತನ ನಿರ್ಮೂಲನೆಗಾಗಿ ಯೋಜನೆ ರೂಪಿಸಿತ್ತು. ಕುಟುಂಬಶ್ರೀ, ಮಹಿಳಾ ಸ್ವ-ಸಹಾಯ ನೆಟ್‌ವರ್ಕ್, ಆಶಾ-ಅಂಗನವಾಡಿ ಕಾರ್ಯಕರ್ತರು ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದೊಂದಿಗೆ ತಳಮಟ್ಟದ ಸಮೀಕ್ಷೆ ನಡೆಸಲಾಯಿತು. ಈ ಸಮೀಕ್ಷೆಯು ಕಡು ಬಡತನದಲ್ಲಿರುವ 64,006 ಕುಟುಂಬಗಳನ್ನು ಗುರುತಿಸಿತು.
ಪ್ರತಿ ಕುಟುಂಬದ ಸಮಸ್ಯೆಯಾದ ವಸತಿ, ಜಮೀನು ಕೊರತೆ, ದೀರ್ಘಕಾಲದ ಅನಾರೋಗ್ಯ, ಆದಾಯದ ಕೊರತೆ ಮತ್ತು ದಾಖಲೆಗಳ ಸಮಸ್ಯೆಗಳನ್ನು ಪರಿಹರಿಸಲು ಯೋಜನೆಗಳನ್ನು ರೂಪಿಸಲಾಯಿತು. ಸರ್ಕಾರಿ ಅಂಕಿ ಅಂಶಗಳ ಪ್ರಕಾರ 5,422 ಹೊಸ ಮನೆಗಳ ನಿರ್ಮಾಣ, 5,522 ಮನೆಗಳ ನವೀಕರಣ, 439 ಕುಟುಂಬಗಳಿಗೆ 28.32 ಎಕರೆ ಭೂಮಿ ಹಂಚಿಕೆ ಮಾಡಲಾಗಿದೆ.
34,672 ಕುಟುಂಬಗಳಿಗೆ ಕೌಶಲ್ಯ ರಹಿತ ಕಾರ್ಮಿಕರ ಕೆಲಸದಿಂದ 77 ಕೋಟಿ ರೂ. ಹೆಚ್ಚುವರಿ ಆದಾಯ ಸಿಕ್ಕಿದೆ. 4,394 ಕುಟುಂಬಗಳಿಗೆ ಸ್ವ-ಉದ್ಯೋಗ ಒದಗಿಸಿ ಬೆಂಬಲ ನೀಡಲಾಗಿದೆ. 8,438 ಕುಟುಂಬಗಳಿಗೆ ಆಹಾರ ಕಿಟ್‌ಗಳು, 20,648 ಕುಟುಂಬಗಳಿಗೆ ದೈನಂದಿನ ಊಟ ಒದಗಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಮತ್ತೆ ಕಡು ಬಡತನ ಮರುಕಳಿಸಬಾರದು
ಬಡತನ ನಿರ್ಮೂಲನೆ ಹೇಗೆ ಸವಾಲಾಗಿದೆಯೋ ಹಾಗೆ ಅದನ್ನು ನಿರ್ಮೂಲನೆ ಮಾಡಿದ ಮೇಲೆ ಮತ್ತೆ ಅದು ಮರುಕಳಿಸದಂತೆ ನೋಡಿಕೊಳ್ಳಬೇಕಾಗಿರುವುದು ಸಹ ಅಷ್ಟೇ ಮುಖ್ಯ. ಇದಕ್ಕೆ ನಿರಂತರ ಶ್ರಮ ಅಗತ್ಯವಿದೆ.
ಕೌಶಲ್ಯ ತರಬೇತಿ, ಮೈಕ್ರೋಕ್ರೆಡಿಟ್ ಮತ್ತು ಸ್ವ-ಉದ್ಯೋಗ ಬೆಂಬಲದ ಮೂಲಕ ಈ ಉಪಕ್ರಮವು ಪರಿಹಾರದಿಂದ ದೀರ್ಘಾವಧಿಯ ಜೀವನೋಪಾಯ ಯೋಜನೆಗಳು ವಿಕಸನಗೊಳ್ಳಬೇಕು. ಡಿಜಿಟಲ್ ಟ್ರ್ಯಾಕಿಂಗ್‌ನೊಂದಿಗೆ ಪಂಚಾಯತ್‌ಗಳು, ಕಲ್ಯಾಣ ಇಲಾಖೆಗಳು ದುರ್ಬಲ ಕುಟುಂಬಗಳು ಮತ್ತೆ ಬಡತನಕ್ಕೆ ಜಾರುವುದನ್ನು ತಡೆಯಬಹುದು.
ಇತರ ರಾಜ್ಯಗಳಿಗೆ ಪಾಠ
ಕೇರಳದ ಯಶಸ್ಸು ಇತರ ರಾಜ್ಯಗಳು ಒಂದು ಪಾಠವಾಗಿದೆ. ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಮೂಲಕ ಕಡುಬಡವರನ್ನು ಗುರುತಿಸಿ ಸೂಕ್ತ ಕ್ರಮಕೈಗೊಂಡರೆ ಭಾರತ ಬಡತನ ಮುಕ್ತ ರಾಷ್ಟ್ರವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.
ವಿಪಕ್ಷಗಳು ಹೇಳಿದ್ದೇನು?
ಸಿಎಂ ವಿಜಯನ್ ಮಾಡಿರುವ ಕಡುಬಡತನ ಘೋಷಣೆಯನ್ನು ವಿರೋಧ ಪಕ್ಷಗಳು ತಳ್ಳಿಹಾಕಿವೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಇದನ್ನು ವಂಚನೆ ಎಂದು ಹೇಳಿದೆ.
ವಿಪಕ್ಷ ನಾಯಕ ವಿ. ಡಿ. ಸತೀಶನ್ ನಿಯಮ 300ರ ಅಡಿಯಲ್ಲಿ ಸಿಎಂ ಹೇಳಿಕೆ ನೀಡಿರುವುದು ಸದನದ ನಿಯಮಗಳ `ಉಲ್ಲಂಘನೆ’ ಎಂದು ಟೀಕಿಸಿದ್ದಾರೆ.




